ನವದೆಹಲಿ: ಫೆ 25- ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಹೊಸ ಡಿಜಿಟಲ್ ಚೌಕಟ್ಟು ರೂಪಿಸಿದೆ. ಅಲ್ಲದೆ, ಇಂಟರ್ನೆಟ್ ಆಧಾರಿತ, ಒಟಿಟಿ ಪ್ಲಾಟ್ಫಾರ್ಮ್ ಗಳಿಗೆ ಕೇಂದ್ರ ಸರ್ಕಾರ ಹೊಸ ನಿಯಮಾವಳಿ ಬಿಡುಗಡೆ ಮಾಡಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಮಾಧ್ಯಮಗಳ ದುರುಪಯೋಗ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಡಿಜಿಟಲ್ ಕಂಟೆಂಟ್ ಕುರಿತಂತೆ 2018 ರ ಡಿಸೆಂಬರ್ ನಲ್ಲಿ ಚೌಕಟ್ಟು ರೂಪಿಸಲಾಗಿದ್ದು, ಇದರಲ್ಲಿ ಎರಡು ವಿಭಾಗಗಳಿರಲಿವೆ. ಟ್ವೀಟ್ ಅಥವಾ ಸಂದೇಶವನ್ನು ಮೊದಲು ಪೋಸ್ಟ್ ಮಾಡಿದ ವ್ಯಕ್ತಿಯ ಮಾಹಿತಿಯನ್ನು ನ್ಯಾಯಾಲಯದ ಆದೇಶ ಅಥವಾ ಸರ್ಕಾರದ ಆದೇಶದಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಬಹಿರಂಗಪಡಿಸಬೇಕು ಎಂದು ಸಚಿವ ರವಿಶಂಕರ್ ವಿವರಿಸಿದರು.
ದೇಶದ ಸಾರ್ವಭೌಮತ್ವ, ಸಮಗ್ರತೆ, ಭದ್ರತೆ, ಶಾಂತಿ, ವಿದೇಶಾಂಗ ವ್ಯವಹಾರಗಳು ಹಾಗೂ ಅಶ್ಲೀಲ ಅಂಶಗಳ ಬಗ್ಗೆ ಪ್ರಚಾರ ಮಾಡುವವರ ವಿಷಯದಲ್ಲಿ ಈ ಕ್ರಮಗಳು ಅನ್ವಯವಾಗಲಿವೆ ಎಂದು ಸಚಿವರು ಹೇಳಿದರು.
ಸಾಮಾಜಿಕ ಮಾಧ್ಯಮಗಳ ದುರುಪಯೋಗ ಸಂಬಂಧ ದೂರು ಪರಿಹರಿಸುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಸಂಬಂಧಪಟ್ಟ ಕುಂದುಕೊರತೆ ನಿವಾರಣೆ ಅಧಿಕಾರಿ ಸದರಿ ದೂರನ್ನು 24 ಗಂಟೆಯೊಳಗೆ ದಾಖಲಿಸಿ 15 ದಿನದೊಳಗೆ ಆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಚಿವರು ವಿವರಿಸಿದರು.
ಮಹಿಳೆಯರ ಘನತೆಗೆ ದಕ್ಕೆ ತರುವಂತಹ ವಿಷಯದಲ್ಲಿ ಯಾವುದೇ ಅಶ್ಲೀಲ ಫೋಟೋಗಳನ್ನು ಬಳಸಬಾರದು. ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವ ಯಾವುದೇ ಫೋಟೋ ಅಪ್ಲೋಡ್ ಮಾಡಿದರೆ, ಈ ಸಂಬಂಧ ದೂರು ನೀಡಿದ 24 ಗಂಟೆಗಳಲ್ಲಿ ಆ ಫೋಟೋಗಳು ಹಾಗೂ ಸಂದೇಶಗಳನ್ನು ಅಳಿಸಬೇಕು ಎಂದು ಸಚಿವರು ಹೇಳಿದರು.
ಮಹಿಳೆಯರ ಮೇಲಿನ ಗೌರವದಿಂದ ಈ ನಿಯಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ಹೇಳಿದರು. ಒಟಿಟಿ ಪ್ಲ್ಯಾಟ್ಫಾರ್ಮ್ಗಳ ಕಣ್ಗಾಗವಲಿಗೆ ಮೂರು ವಿಧಾನಗಳನ್ನು ಅನುಸರಿಸಲಿರುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು. ಒಟಿಟಿ ಗಳೊಂದಿಗೆ ಡಿಜಿಟಲ್ ಸುದ್ದಿ ಮಾಧ್ಯಮ ಸಂಸ್ಥೆಗಳು ತಮ್ಮ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿದೆ. ಆದರೆ ನೋಂದಣಿ ಕಡ್ಡಾಯಗೊಳಿಸುವುದಿಲ್ಲ. ಆದರೆ ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ಸಚಿವರು ವಿವರಿಸಿದರು. ಒಟಿಟಿ ಪ್ಲ್ಯಾಟ್ಫಾರ್ಮ್ಗಳ ಜೊತೆಗೆ ಡಿಜಿಟಲ್ ಪೋರ್ಟಲ್ಗಳಿಗೆ ಸಂಬಂಧಿಸಿದಂತೆ ದೂರು ಪರಿಹಾರ ವ್ಯವಸ್ಥೆ ಹೊಂದರಬೇಕು. ಒಟಿಟಿಗಳು ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಅಳವಳಿಸಿಕೊಂಡಿರಬೇಕು. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಥವಾ ಹೈಕೋರ್ಟ್ ನ್ಯಾಯಾಧೀಶರು ಅಥವಾ ಪ್ರಮುಖ ವ್ಯಕ್ತಿಗಳು ಆ ಜವಾಬ್ದಾರಿ ನಿಭಾಯಿಸಲಿದ್ದಾರೆ.