ಮುಂಬೈ: ಫೆ 26- ಚಹಾ ನೀಡಲು ನಿರಾಕರಿಸುವ ಮೂಲಕ ಪತ್ನಿ ಹಲ್ಲೆ ನಡೆಸಲು ಪ್ರಚೋದನೆ ನೀಡಿದ್ದಳು ಎಂಬುದನ್ನು ಒಪ್ಪಲಾಗದು. ಪತ್ನಿಯನ್ನು ಪ್ರಾಣಿಯಂತೆ ನೋಡುವುದು ಸರಿಯಲ್ಲ, ಆಕೆ ಒಂದು ಪಶು ಅಥವಾ ವಸ್ತುವಲ್ಲ ಎಂದು ಬಾಂಬೆ ಹೈಕೋರ್ಟ ಹೇಳಿದೆ.
ಚಹಾ ನೀಡಲಿಲ್ಲ ಎಂಬ ಕಾರಣದಿಂದ ಕುಪಿತಗೊಂಡು ಪತ್ನಿ ಮೇಲೆ ಹಲ್ಲೆ ನಡೆಸಿದ್ದ 35 ವರ್ಷದ ಸಂತೋಷ್ ಅಟ್ಕರ್ ಎಂಬ ವ್ಯಕ್ತಿಗೆ 2016 ರಲ್ಲಿ ಸ್ಥಳೀಯ ಪಂಡರಾಪುರ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ. “ಮದುವೆ ಸಮಾನತೆಯ ಮೇಲೆ ನಿಂತಿರುವ ಪಾಲುದಾರಿಕೆ” ಎಂದು ನ್ಯಾಯಮೂರ್ತಿ ರೇವತಿ ಮೋಹಿತ ದೇರೆ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಪಿತೃಪ್ರಧಾನ ಮನಸ್ಥಿತಿಯಿಂದಾಗಿ, ಸ್ತ್ರಿ ಪುರುಷನ ಆಸ್ತಿ ಎಂಬ ಧೋರಣೆ ಸಮಾಜದಲ್ಲಿ ಬೇರೂರಿದೆ. ಈ ಮನಸ್ಥಿತಿಯಿಂದ ಪುರುಷ ತಮ್ಮ ಪತ್ನಿಯನ್ನು ಪಶು ಅಥವಾ ವಸ್ತು ಎಂದು ಪರಿಗಣಿಸಲು ಕಾರಣವಾಗುತ್ತಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆ ನಡೆಯುವ ಮೊದಲು, ಸಂತೋಷ ಅಟ್ಕರ್ ಹಾಗೂ ಪತ್ನಿ ನಡುವೆ ಕೆಲ ಸಮಯದಿಂದ ಮನಸ್ತಾಪ ಹೊಂದಿದ್ದರು. ಘಟನೆ ನಡೆದ ದಿನ, 2013ರ ಡಿಸೆಂಬರ್ ನಲ್ಲಿ ಅಟ್ಕರ್ ಪತ್ನಿ, ಪತಿಗೆ ಚಹಾ ತಯಾರಿಸಿ ಕೊಡದೆ ಹೊರಗೆ ಹೋಗಿದ್ದರು. ಇದರಿಂದ ಕುಪಿತಗೊಂಡ ಪತಿ ಅಟ್ಕರ್ ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದು, ತೀವ್ರ ಗಾಯವಾಗಿ ರಕ್ತಸ್ರಾವವಾಗಿದೆ. ಆದರೆ, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಪತಿ ಅಟ್ಕರ್ ರಕ್ತ ಚೆಲ್ಲಾಡಿದ್ದ ಸ್ಥಳವನ್ನು ಸ್ವಚ್ಚಗೊಳಿಸಿ, ಆಕೆಗೆ ಸ್ನಾನ ಮಾಡಿಸಿ , ನಂತರ ಆಸ್ಪತ್ರೆಗೆ ಕರೆದೊಯ್ದಿದ್ದ. ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನಿಂದಿಗೆ ಹೋರಾಡಿದ ನಂತರ ಪತ್ನಿ ನಂತರ ಮೃತಪಟ್ಟಿದ್ದರು. ಆದರೆ ಮೃತ ಪತ್ನಿ ಚಹಾ ನೀಡದೆ ತನ್ನ ಗಂಡನನ್ನು ಹಿಂಸೆಗೆ ಪ್ರಚೋದಿಸಿದ್ದರು ಎಂದು ಅಟ್ಕರ್ ಪರ ವಕೀಲರು ಎಂದು ನ್ಯಾಯಾಲಯದ ಮುಂದೆ ವಾದಿಸಿದರು.
ಈ ವಾದವನ್ನು ಹೈಕೋರ್ಟ ತೀವ್ರವಾಗಿ ವಿರೋಧಿಸುವುದರ ಜತೆಗೆ, ಸ್ಥಳೀಯ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದಿದೆ. ಇಂತಹ ಪ್ರಕರಣಗಳು ಲಿಂಗ ತಾರತಮ್ಯ, ಅಸಮಾನತೆಯನ್ನು ಪ್ರತಿಬಿಂಬಿಸುತ್ತವೆ ಎಂದು ನ್ಯಾಯಮೂರ್ತಿ ಮೋಹಿತ್ ಡೆರೆ ಅಭಿಪ್ರಾಯಪಟ್ಟರು. ಸಾಮಾಜಿಕ ಪರಿಸ್ಥಿತಿ ಮಹಿಳೆಯರನ್ನು ತಮ್ಮ ಗಂಡಂದಿರಿಗೆ ಶರಣಾಗುವಂತೆ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇಂತಹ ಪ್ರಕರಣಗಳಲ್ಲಿ ಪುರುಷರು, ಪತ್ನಿಯರನ್ನು ವೈಯಕ್ತಿಕ ಆಸ್ತಿಯೆಂದು ಪರಿಗಣಿಸಿ, ಗಂಡಂದಿರು ಏನು ಮಾಡಬೇಕೆಂದು ಹೇಳುತ್ತಾರೋ ಅದನ್ನು ಮಾಡಬೇಕು ಎಂಬ ಭಾವನೆಯಲ್ಲಿ ಪತ್ನಿಯರು ಮುಳುಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ತಮ್ಮ ತಂದೆ, ತಾಯಿಯನ್ನು ಥಳಿಸಿ ನಂತರ ರಕ್ತ ಚೆಲ್ಲಾಡಿದ್ದ ಪ್ರದೇಶವನ್ನು ಸ್ವಚ್ಚಗೊಳಿಸುವುದನ್ನು ದಂಪತಿ ಪುತ್ರಿ ನೋಡಿದ್ದರು ಎಂದು ನ್ಯಾಯಾಲಯ ಹೇಳಿದೆ.