ಮೀರತ್: ಫೆ 28- ಕೇಂದ್ರ ಸರ್ಕಾರ ತಂದಿರುವ ಹೊಸ ಕೃಷಿ ಕಾಯ್ದೆಗಳ ವಿರುದ್ಧ ರೈತರು ಮೂರು ತಿಂಗಳುಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೀರತ್ನಲ್ಲಿ ಭಾನುವಾರ ನಡೆದ ‘ಕಿಸಾನ್ ಮಹಾ ಪಂಚಾಯಿತ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅರವಿಂದ ಕೇಜ್ರೀವಾಲ್, ದೇಶದ ರೈತರು ಸಂತೋಷವಾಗಿಲ್ಲ ಎಂದು ಹೇಳಿದರು.
ರಾಷ್ಟ್ರ ರಾಜಧಾನಿ ದೆಹಲಿ ಸಮೀಪ ರೈತರು ಕಳೆದ 90 ದಿನಗಳಿಂದ ತಮ್ಮ ಕುಟುಂಬಗಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮೂರು ತಿಂಗಳಲ್ಲಿ 250 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದರೂ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 26 ರಂದು ಕೆಂಪು ಕೋಟೆ ಹಿಂಸಾಚಾರಗಳಿಗೆ ಕೇಂದ್ರ ಸರ್ಕಾರವನ್ನು ಅವರು ದೂಷಿಸಿದರು. ಕೆಂಪು ಕೋಟೆಯ ಹಿಂಸಾಚಾರಗಳ ಹಿಂದೆ ಇರುವುದು ಕೇಂದ್ರ ಸರ್ಕಾರ, ರೈತರು ಅಲ್ಲ ಎಂದು ಹೇಳಿದರು. ಅಂದು ನಿಜವಾಗಿ ಏನು ನಡೆಯಿತು ಎಂಬುದು ದೆಹಲಿಯ ಮುಖ್ಯಮಂತ್ರಿಯಾಗಿ ತಮಗೆ ಚೆನ್ನಾಗಿಯೇ ಗೊತ್ತಿದೆ ಎಂದು ಹೇಳಿದರು.
‘ಕೆಂಪು ಕೋಟೆ ಹಿಂಸಾಚಾರಗಳ ಹಿಂದಿರುವುದು ಕೇಂದ್ರ ಸರ್ಕಾರ, ರೈತರಲ್ಲ. ರೈತರಿಗೆ ದೆಹಲಿಯ ರಸ್ತೆಗಳೂ ತಿಳಿದಿಲ್ಲ. ಅಂತಹ ರೈತರನ್ನು ಕೇಂದ್ರ ಸರ್ಕಾರ ದಾರಿ ತಪ್ಪಿಸುತ್ತಿದೆ ”ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರು ಹಲವಾರು ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿಯೂ ಸಹ ಇಂತಹ ಕೃತ್ಯಗಳು ನಡೆದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ ಪ್ರತಿಭಟನಾಕಾರರ ವಿರುದ್ಧ ಈಗ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ರೈತರನ್ನು ಏನಾದರೂ ಅನ್ನಬಹುದು ಆದರೆ ದೇಶದ್ರೋಹಿಗಳು ಎಂದು ಮಾತ್ರ ಕರೆಯಲು ಸಾಧ್ಯವಿಲ್ಲ. ಆದರೂ ಅವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಲಾಗುತ್ತಿದೆ. ” ರೈತರ ಇಬ್ಬರು ಪುತ್ರರಲ್ಲಿ ಒಬ್ಬರು ದೇಶದ ಗಡಿಗಳನ್ನು ಕಾಪಾಡುವಲ್ಲಿ ನಿರತರಾಗಿದ್ದರೆ, ಇನ್ನೊಬ್ಬರು (ರೈತ) ದೆಹಲಿಯ ಗಡಿಯಲ್ಲಿದ್ದಾನೆ ” ಎಂದು ಕೇಜ್ರಿವಾಲ್ ಹೇಳಿದಾಗ ಸಭೆಯಲ್ಲಿ ಜೈ ಜವಾನ್ ಜೈ ಕಿಸಾನ್ ಘೋಷಣೆಗಳು ಮೊಳಗಿದವು.2022 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಎಪಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಮೀರತ್ನಲ್ಲಿ ಕಿಸಾನ್ ಮಹಾ ಪಂಚಾಯತ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.