ಅಹಮದಾಬಾದ್, ಮಾ.4 – ಸ್ಪಿನ್ ಬೌಲರ್ ಗಳಾದ ಅಕ್ಷರ ಪಟೇಲ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಅವರ ಬಿಗುವಿನ ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ ನಲುಗಿದ್ದು, ಭಾರತ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 205 ರನ್ ಗಳಿಗೆ ಸರ್ವಪತನ ಹೊಂದಿದೆ. ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 24 ರನ್ ಕಲೆ ಹಾಕಿದೆ. ಆರಂಭಿಕ ಆಟಗಾರ ಶುಭಮನ್ ಗಿಲ್ ರನ್ ಸೇರಿಸದೇ ಪೆವಿಲಿಯನ್ ಸೇರಿದರು. ರೋಹಿತ ಶರ್ಮಾ (ಅಜೇಯ 8) ಹಾಗೂ ಚೇತೇಶ್ವರ್ ಪೂಜಾರ (ಅಜೇಯ 15) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ವಿರಾಟ ಪಡೆ ಬೃಹತ್ ಮುನ್ನಡೆಯತ್ತ ಚಿತ್ತ ನೆಟ್ಟಿದೆ.
ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ಆರಂಭಿಕರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಜೋ ರೂಟ್ (5) ಸಿರಾಜ್ ತೋಡಿದ ಖೆಡ್ಡಾಗೆ ಬಲಿಯಾದರು. 30 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಒತ್ತಡದಲ್ಲಿದ್ದ ಪ್ರವಾಸಿ ತಂಡಕ್ಕೆ ಜಾನಿ ಬೇರ್ ಸ್ಟೊ ಹಾಗೂ ಬೆನ್ ಸ್ಟೋಕ್ಸ್ ಆಧಾರವಾದರು. ಈ ಜೋಡಿ ನೆಲಕಚ್ಚಿ ಬ್ಯಾಟಿಂಗ್ ಮಾಡುವ ಸೂಚನೆ ನೀಡಿತು. ಅಲ್ಲದೆ ರನ್ ವೇಗಕ್ಕೆ ಚುರುಕು ಮುಟ್ಟಿಸಿತು.
ನಾಲ್ಕನೇ ವಿಕೆಟ್ ಗೆ ಬೇರ್ ಸ್ಟೊ ಹಾಗೂ ಸ್ಟೋಕ್ಸ್ 97 ಎಸೆತಗಳಲ್ಲಿ 48 ರನ್ ಸೇರಿಸಿದರು. ನಾಲ್ಕನೇ ವಿಕೆಟ್ ಗೆ ಸ್ಟೋಕ್ಸ್ ಹಾಗೂ ಒಲಿ ಪೋಪ್ ಜೋಡಿ ಸಹ 43 ರನ್ ಗಳನ್ನು 111 ಎಸೆತಗಳಲ್ಲಿ ಕಲೆ ಹಾಕಿತು. ಬೆನ್ ಸ್ಟೋಕ್ಸ್ 121 ಎಸೆತಗಳಲ್ಲಿ 55 ರನ್ ಬಾರಿಸಿದರು. ಇವರ ಅಮೋಘ ಇನ್ನಿಂಗ್ಸ್ ನಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿವೆ.
ಪೋಪ್ ಹಾಗೂ ಡಾನ್ ಲಾರೆನ್ಸ್ ಜೋಡಿ ಸಹ ಆರನೇ ವಿಕೆಟ್ ಗೆ 45 ರನ್ ಸೇರಿಸಿತು. ಆದರೆ ಇಂಗ್ಲೆಂಡ್ ಪರ ದೊಡ್ಡ ಜೊತೆಯಾಟಗಳು ಬಾರದೆ ಇದ್ದಿದ್ದರಿಂದ ತಂಡ ಸಾಧರಣ ಮೊತ್ತ ಕಲೆ ಹಾಕಿತು.
ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 26 ಓವರ್ ಬೌಲಿಂಗ್ ನಡೆಸಿ 68 ರನ್ ನೀಡಿ 4 ವಿಕೆಟ್ ಕಬಳಿಸಿದರು. ಆಫ್ ಸ್ಪಿನ್ ಬೌಲರ್ ಅಶ್ವಿನ್ 47 ರನ್ ನೀಡಿ 3 ವಿಕೆಟ್ ಸೇರಿಸಿದರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 205
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ 1 ವಿಕೆಟ್ ಗೆ 24
ಯುಎನ್ಐ ವಿಎನ್ಎಲ್ 1802