ಬೆಂಗಳೂರು: ಮಾ 9 – ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದು, ಈ ಬಗ್ಗೆ ರಚನೆ ಮಾಡಿರುವ ಉನ್ನತ ಮಟ್ಟದ ಸಮಿತಿಯನ್ನು ರದ್ದುಗೊಳಿಸಬೇಕು ಮತ್ತು ಪ್ರಬಲ ಜಾತಿಗಳಿಗೆ ಆಯವ್ಯಯದಲ್ಲಿ ನೀಡಿರುವ ಅನುದಾನದ ರೀತಿಯಲ್ಲಿಯೇ ಅತಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಅನುದಾನ ಕೊಡುವಂತೆ ಅತಿ ಹಿಂದುಳಿದ ವರ್ಗಗಳ ವೇದಿಕೆಯ ನಿಯೋಗ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಜತೆಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಅತಿ ಹಿಂದುಳಿದ ವರ್ಗಗಳ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ ನೇತೃತ್ವದ ನಿಯೋಗ ಮನವಿ ಮಾಡಿತು.
ಬಳಿಕ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪ್ರವರ್ಗ ೨(ಎ) ನಲ್ಲಿರುವ 102 ಅತಿ ಹಿಂದುಳಿದ ಜಾತಿ ವರ್ಗಗಳು ಒಂದಾಗಿ ಈ ಮನವಿಯನ್ನು ನೀಡುತ್ತಿದ್ದೇವೆ. ಪ್ರವರ್ಗ ೨(ಎ) ಗೆ ಸೇರ್ಪಡೆಗೊಳಿಸುವಂತೆ ಹಲವಾರು ಪ್ರಬಲ ಸಮುದಾಯಗಳು ತಮ್ಮ ಬಲಪ್ರದರ್ಶನ ಮಾಡುತ್ತಿವೆ. ಈಗಾಗಲೇ ಪ್ರವರ್ಗ ೨(ಎ) ದಲ್ಲಿರುವ ಹಲವಾರು ಅತಿ ಹಿಂದುಳಿದ ಜಾತಿಗಳು ಈ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಲು ಆಗಿಲ್ಲ. ಈ ಸಂಧರ್ಭದಲ್ಲಿ ಇನ್ನು ಹೆಚ್ಚಿನ ಜಾತಿಗಳ ಸೇರ್ಪಡೆಯಿಂದಾಗಿ ಈಗಾಗಲೇ ಇರುವ ಜಾತಿಗಳಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರವರ್ಗ ೨(ಎ) ದಲ್ಲಿರುವ ಅತಿ ಹಿಂದುಳಿದ ಜಾತಿಗಳ ಅಸ್ತಿತ್ವ ಮತ್ತು ಆಸ್ಮಿತೆ ಕಾಪಾಡುವ ನಿರ್ಧಾರ ತಗೆದುಕೊಳ್ಳುವಂತೆ ಮನವಿ ಮಾಡಿದರು.
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ ವೇಣುಗೋಪಾಲ್ ಮಾತನಾಡಿ, ಪ್ರವರ್ಗ ೨(ಎ) ಪಟ್ಟಿಯಲ್ಲಿರುವ ಅತಿ ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ನೀಡುವ ಅವಶ್ಯಕತೆ ಇದೆ. ಅಲ್ಲದೆ ಈಗಾಗಲೇ ಸಿದ್ದಗೊಂಡಿರುವ ಜಾತಿವಾರು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಪ್ರವರ್ಗ ೨(ಎ) ದಲ್ಲಿರುವ ಜಾತಿಗಳಿಗೆ ರಕ್ಷಣೆ ನೀಡಿ ಎಂದು ಹೇಳಿದರು.
ವೇದಿಕೆಯ ಗೌರವ ಸಲಹೆಗಾರ, ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ, ಕಳೆದ ಕೆಲವು ದಿನಗಳಿಂದಲೂ ತಮ್ಮನ್ನು ಪ್ರವರ್ಗ 2(ಎ)ಗೆ ಸೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತರುವ ಹೋರಾಟವನ್ನು ಹಮ್ಮಿಕೊಂಡಿರುವ ʼವೀರಶೈವ ಪಂಚಮಸಾಲಿ’ ಸಮುದಾಯ ಮತ್ತು ಇವರ ಹಾದಿಯಲ್ಲೇ ಹೊರಟ ಇತರೇ ಪ್ರಭಾವಿ ಸಮುದಾಯಗಳ ಒತ್ತಡವನ್ನು ಗಮನಿಸಿದರೆ ಈ ರಾಜ್ಯದಲ್ಲಿ ನಮ್ಮಂತಹ ಸಣ್ಣ ಪುಟ್ಟ ಸಮುದಾಯಗಳ ಭವಿಷ್ಯ ಅತ್ಯಂತ ಧಾರುಣವಾಗುವ ಸೂಚನೆಗಳು ಕಾಣುತ್ತಿವೆ ಎಂದರು.
ಪ್ರವರ್ಗ 2(ಎ) ನಲ್ಲಿ ಶೇ 15 ರಷ್ಟು ಮೀಸಲಾತಿ ಇದ್ದು ಇದನ್ನು 102 ಅತೀ ಹಿಂದುಳಿದ ಸಮುದಾಯಗಳು ಹಂಚಿಕೊಳ್ಳಬೇಕಿದೆ. ಈ 15 ರಷ್ಟು ಮೀಸಲಾತಿ ಇನ್ನೂ ಅರ್ದದಷ್ಟು ದ್ವನಿಯೇ ಇಲ್ಲದ ಸಮುದಾಯಗಳಿಗೂ ತಲುಪಿಲ್ಲ! ಆಶ್ಚರ್ಯವೆಂದರೆ ಇಲ್ಲಿನ ಅನೇಕ ಸಮುದಾಯಗಳಿಗೆ ಇಷ್ಟು ದಶಕಗಳಲ್ಲಿ ಒಮ್ಮೆಯೂ ಮೀಸಲಾತಿ ಸೌಲಭ್ಯ ದೊರೆತಿಲ್ಲ! ಇದರ ಬಗ್ಗೆ ತಮ್ಮ ಆಯೋಗ ಜಾತಿವಾರು ಸಮೀಕ್ಷೆಗಾಗಿ ಸಂಗ್ರಹಿಸಿರಬಹುದಾದ ದ್ವಿತೀಯ ಮೂಲದ(secondary source of information) ಮಾಹಿತಿಯನ್ನು ಗಮನಿಸಬೇಕು ಎಂದರು.
ವೇದಿಕೆಯ ಗೌರವ ಸಲಹೆಗಾರ ಡಾ. ಸಿ.ಎಸ್ ದ್ವಾರಾಕಾನಾಥ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಅಸ್ತಿತ್ವದಲ್ಲಿ ಇರುವಾಗ ಈಗಿನ ಮೀಸಲಾತಿ ಗೊಂದಲದ ಬಗ್ಗೆ ಮತ್ತೊಂದು “ಉನ್ನತ ಮಟ್ಟದ ಸಮಿತಿ”ಯನ್ನು ಸರ್ಕಾರ ಮಾಡಹೊರಟಿರುವುದು ಅನೈತಿಕ ಮತ್ತು ಅನಾವಶ್ಯಕ. ಈಗಿನ ಮೀಸಲಾತಿ ಗೊಂದಲವನ್ನು ಸದರಿ ಆಯೋಗವೇ ಪರಿಹರಿಸಬೇಕೆಂಬುದು ನಮ್ಮ ಆಶಯ. ಈ ಕಾರಣಕ್ಕೆ ಸದರಿ ಸಮಿತಿಯನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ಏಕೈಕ ಮಾರ್ಗ ಸರ್ಕಾರದ ಮುಂದಿರುವುದೆಂದರೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ “ಜಾತಿವಾರು ಸಮೀಕ್ಷೆ” (socio economical & educational survey)ಯನ್ನು ಸ್ವೀಕರಿಸಿ ಸಾರ್ವಜನಿಕ ವಾಗಿ ಚರ್ಚೆಗೆ ಬಿಟ್ಟು ಆಯೋಗ ನೀಡಿರುವ ಅಂಕಿ ಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ಪಟ್ಟಿಗಳನ್ನು ರೂಪಿಸಬೇಕು ಎಂದು ಹೇಳಿದರು.
ವೇದಿಕೆಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯ ಪಿ. ಆರ್. ರಮೇಶ ಮಾತನಾಡಿ, ಇದು ಪ್ರವರ್ಗ 2(ಎ) ನಲ್ಲಿರುವ ಅತಿ ಹಿಂದುಳಿದ, ಅಸಹಾಯಕ, ಅಸಂಘಟಿತ ಜಾತಿಗಳ ಜೀವನ್ಮರಣದ ಪ್ರಶ್ನೆ, ಹಾಗೇನಾದರೂ ಸರ್ಕಾರ ಬಲಿಷ್ಟರ ನ್ಯಾಯಬದ್ದವಲ್ಲದ ಒತ್ತಾಯಕ್ಕೆ ಮಣಿದರೆ ಇದು ತಬ್ಬಲಿ ಸಮುದಾಯಗಳ ಸಾಮೂಹಿಕ ಆತ್ಮಹತ್ಯೆಗೆ ಪ್ರೇರಣೆಯಾಗುತ್ತದೆ ಎಂದು ಅತ್ಯಂತ ನೋವಿನಿಂದ ಹೇಳುತ್ತಿದ್ದೇವೆ. ಬಲಿಷ್ಟರ ಈ ಅನ್ಯಾಯದ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುವ ನಾವು, ವೈಜ್ಞಾನಿಕವಾಗಿ, ನ್ಯಾಯಬದ್ದವಾಗಿ, ಸಾಂಪ್ರದಾಯಿಕವಾಗಿ ನಮಗೆ ದಕ್ಕಿರುವ ಹಕ್ಕು ಗಳಿಗೆ ಚ್ಯುತಿ ಬಾರದಂತೆ ನಮ್ಮ ಸಮುದಾಯಗಳಿಗೆ ರಕ್ಷಣೆ ನೀಡಿ ಸಾಮಾಜಿಕ ನ್ಯಾಯ ದಯಪಾಲಿಸಬೇಕು ಎಂದರು.
ಸರ್ಕಾರ ನಮ್ಮ ನೈತಿಕ ಮತ್ತು ನ್ಯಾಯಬದ್ದ ಮನವಿಯನ್ನು ಮಾನ್ಯ ಮಾಡದಿದ್ದರೆ ಪ್ರವರ್ಗ 2(a) ಪಟ್ಟಿಯಲ್ಲಿರುವ ಎಲ್ಲಾ 102 ಜಾತಿವರ್ಗಗಳು ಸಂಘಟಿತವಾಗಿ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.