ಹೈದರಾಬಾದ: ಮಾರ್ಚ್ 15 – ಸಾರ್ವಜನಿಕ ವಲಯದ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಕರೆ ನೀಡಿರುವ ಎರಡು ದಿನಗಳ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಮುಷ್ಕರದಿಂದ ದೇಶಾದ್ಯಂತ ಬ್ಯಾಂಕಿಂಗ್ ಕಾರ್ಯಾಚರಣೆಗಳ ತೀವ್ರ ಪರಿಣಾಮ ಬೀರಿದೆ.
ಎಐಬಿಇಎ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಎಫ್ಐ, ಐಎನ್ಬಿಇಎಫ್, ಐಎನ್ಬಿಒಸಿ, ಎನ್ಒಬಿಡಬ್ಲ್ಯೂ ಮತ್ತು ಎನ್ಒಬಿಓ ಸೇರಿದಂತೆ 9 ಬ್ಯಾಂಕ್ ಒಕ್ಕೂಟಗಳು ಯುಎಫ್ ಬಿಯು ವೇದಿಕೆಯಲ್ಲಿವೆ.
ಐಡಿಬಿಐ ಬ್ಯಾಂಕ್ ಅಲ್ಲದೆ ಇನ್ನೂ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಪ್ರಕಟಿಸಿರುವ ನಿರ್ಧಾರದ ಹಿನ್ನೆಲೆಯಲ್ಲಿ ಯುಎಫ್ಬಿ, ಮಾರ್ಚ 15 ಮತ್ತು 16 ರಂದು ಎರಡು ದಿನಗಳ ಪ್ರತಿಭಟನೆ ಮತ್ತು ಮುಷ್ಕರಕ್ಕೆ ಕರೆ ನೀಡಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ)ದ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಯುಎನ್ಐಗೆ ತಿಳಿಸಿದ್ದಾರೆ.
ಮಾರ್ಚ 4, 9 ಮತ್ತು 10 ರಂದು ಹೆಚ್ಚುವರಿ ಮುಖ್ಯ ಕಾರ್ಮಿಕ ಆಯುಕ್ತ ಎಸ್ ಸಿ ಜೋಶಿ ನಡೆಸಿದ ಸಂಧಾನ ಸಭೆಯಲ್ಲಿ, ಸರ್ಕಾರ ನಿರ್ಧಾರವನ್ನು ಮರುಪರಿಶೀಲಿಸಿದರೆ ನಾವು ಮಷ್ಕರವನ್ನು ಮರುಪರಿಶೀಲಿಸುವುದಾಗಿ ಹೇಳಿದ್ದೆವು. ಯುಎಫ್ಬಿಯುನ ಪ್ರಸ್ತಾವನ್ನು ಸರ್ಕಾರ ಒಪ್ಪಲಿಲ್ಲವಾದ್ದರಿಂದ ಮುಷ್ಕರ ನಡೆಸುತ್ತಿದ್ದೇವೆ ಎಂದು ವೆಂಕಟಾಚಲಂ ಹೇಳಿದ್ದಾರೆ.