ಕೊಲ್ಕತ್ತಾ: ಮಾ 15 – ದೇಶಾದ್ಯಂತ ಪ್ರವಾಸ ಕೈಗೊಂಡು ರೈತರ ಹೋರಾಟವನ್ನು ವಿಸ್ತರಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ ಟಿಕಾಯತ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ದಲ್ಲಿ ಪ್ರಸ್ತುತ ಪ್ರವಾಸ ಮಾಡುತ್ತಿರುವ ಅವರು, ಈ ತಿಂಗಳು ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಹಾಗೂ ಕರ್ನಾಟಕ ದಲ್ಲಿ ಪ್ರವಾಸ ಕೈಗೊಳ್ಳುವುದಾಗಿ, ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಅಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಡಿಸೆಂಬರ್ ವರೆಗೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹೊಸ ಕೃಷಿ ಕಾಯ್ದೆಗಳು ಸಣ್ಣ ವ್ಯಾಪಾರಿಗಳು, ಕೈಗಾರಿಕೆಗಳು ಮುಚ್ಚಲು ಕಾರಣವಾಗಲಿವೆ. ಕೇವಲ ವಾಲ್ಮಾರ್ಟ್ನಂತಹಬೃಹತ್ ಮಾಲ್ಗಳಿಗೆ ಮಾತ್ರ ಕಾಯಿದೆಗಳಿಂದ ಲಾಭವಾಗಲಿದೆ ಎಂದು ಅವರು ಹೇಳಿದರು. ವಿವಿಧ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನು ಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಒಂದು ರಾಜಕೀಯ ಪಕ್ಷಕ್ಕೆ ಸೇರಿದ್ದೇ ಆಗಿದ್ದರೆ ರೈತರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಬಹುದಿತ್ತು ಆದರೆ.. ಇದು ಬೃಹತ್ ಉದ್ಯಮಿಗಳು, ವ್ಯಾಪಾರಿಗಳು ನಡೆಸುವ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಇಡೀ ದೇಶವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ರಾಕೇಶ ಟಿಕಾಯತ್ ವಿಶ್ಲೇಷಿಸಿದರು.
ಅದೇ ರೀತಿ ಬಿಜೆಪಿಯನ್ನು ಸೋಲಿಸುವಂತೆ ಪಶ್ಚಿಮ ಬಂಗಾಳದ ರೈತರಿಗೆ ಟಿಕಾಯತ್ ಕರೆ ನೀಡಿದರು. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಬಡ ರೈತರ ಜಮೀನು ಕಾರ್ಪೊರೇಟ್ ಕಂಪನಿಗಳ ಹಿಡಿತಕ್ಕೆ ಸಿಲುಕಲಿದೆ ಎಂದು ಅವರು ಎಚ್ಚರಿಸಿದರು.
ಕೇಂದ್ರ ರೈತರ ಸಮಸ್ಯೆಗಳಿಗೆ ಬೆನ್ನು ತಿರುಗಿಸುತ್ತಿದೆ. ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹೊಸಗಿಹಾಕಲು ಪ್ರಯತ್ನಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.