ಶೂನ್ಯವೇಳೆಯಲ್ಲಿ ಉತ್ತರಿಸಿದ ಅವರು, ಎಲ್ಲ ಕಡೆ ಸಮಸ್ಯೆ ಇರುವುದ ನಿಜ. ಅದರ ಪರಿಹಾರಕ್ಕೆ ಹೆಚ್ಚು ಹಣ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದರು.
ಆಗ ಮಧ್ಯಪ್ರವೇಶಿಸಿದ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಯ ಅಗತ್ಯವಿದೆ. ಆದ್ದರಿಂದ ಶೂನ್ಯ ವೇಳೆಯ ಬದಲಾಗಿ ಅರ್ಧಗಂಟೆ ವಿಸ್ತøತ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.
ಜೆಡಿಎಸ್ನ ಎ.ಟಿ.ರಾಮಸ್ವಾಮಿ, ಇಡೀ ರಾಜ್ಯ ಬೇಸಿಗೆ ಧಗೆಯಿಂದ ಬಸವಳಿಯುತ್ತಿದೆ. ನೀರಿನ ಜೊತೆಗೆ ವಿದ್ಯುತ್ ಇಲಾಖೆಯಿಂದ ಎದುರಾಗುತ್ತಿರುವ ತಾಂತ್ರಿಕ ತೊಂದರೆಗಳಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದು ಗಮನ ಸೆಳೆದರು. ಸದನದ ಹಲವು ಸಮಸ್ಯೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು.
ನಂತರ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕ್ರೀಡಾ ಸಚಿವ ಡಾ.ನಾರಾಯಣಗೌಡ ಬೆಳಗಾವಿ ಬಳಿಯ ಯಳ್ಳೂರ ಗ್ರಾಮದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ 50 ಕೋಟಿ ವೆಚ್ಚದ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುವುದು ಎಂದರು.
ಯಳ್ಳೂರ ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವುದಕ್ಕೆ ಅತ್ಯಂತ ಸೂಕ್ತವಾದ 54 ಎಕರೆ ಜಾಗವಿದೆ. ಈ ಸ್ಥಳವು ಬೆಳಗಾವಿ ನಗರದ ಎಲ್ಲ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಬೆಳಗಾವಿ ರಿಂಗ್ ರಸ್ತೆಯ ಸಮೀಪ ಈ ಜಾಗವಿದೆ. ಹೀಗಾಗಿ ಉನ್ನತ ಮಟ್ಟದ ಸಮಿತಿ ಸಮೀಕ್ಷೆಯ ನಂತರ ಇಲ್ಲಿ ಕ್ರೀಡಾಂಗಣ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಈ ಕ್ರೀಡಾಂಗಣಕ್ಕೆ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಿಂದ 50 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದರು.
ಕೋವಿಡ್ ನೆಪದಲ್ಲಿ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹಣ ಕೊಡಲಿಲ್ಲ. ಬಡಪಾಯಿ ಶಾಸಕರಿಗೆ ಅನುದಾನ ವಂಚಿಸಲಾಗಿದೆ. ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಅನುದಾನವನ್ನು ಸರ್ಕಾರ ಉದ್ದೇಶಪೂರ್ವಕವಾಗಿ ನಿಲ್ಲಿಸಿದೆ ಎಂದು ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪಿಸಿದರು.
ಬಜೆಟ್ ಮೇಲೆ ಭಾಷಣ ಮಾಡಿದ ಅವರು, ಸರ್ಕಾರ ತಮ್ಮ ಪಕ್ಷದ ಶಾಸಕರ ಅನುದಾನವನ್ನು ನಿಲ್ಲಿಸಿಲ್ಲ ಎಂದರು. ನಮ್ಮಂತಹ ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬಂದಾಗ ಕೋವಿಡ್ ನೆಪವನ್ನು ಹೇಳುತ್ತ ಬಂದಿರಲ್ಲ; ಹೀಗಾದರೆ ಹೇಗೆ ಸ್ವಾಮಿ ಎಂದು ತಮ್ಮದೇ ಆದ ಗ್ರಾಮ್ಯ ಭಾಷೆಯಲ್ಲಿ ಸರ್ಕಾರವನ್ನು ಪ್ರಶ್ನಿಸಿದರು.
ಜಿಎಸ್ಟಿ ಪಾಲು ಕೊಡುವಲ್ಲಿ ಕೇಂದ್ರದ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದೂ ಅವರು ಖಂಡಿಸಿದರು. ನಮ್ಮ ರಾಜ್ಯದ ಪರವಾಗಿ ಧ್ವನಿ ಎತ್ತುವರೇ ಇಲ್ಲದಂತಾಗಿದೆ. ನಮ್ಮ ಸಂಸದರೂ ಕೂಡ ಸುಮ್ಮನಿದ್ದಾರೆ. ಆಳುವ ಪಕ್ಷದ ಸಂಸದರಿದ್ದೂ ಪ್ರಯೋಜನ ಇಲ್ಲದಾಗಿದೆ ಎಂದು ಹೇಳಿದರು.
ಆನೇಕಲ್ ತಾಲ್ಲೂಕಿನ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ತುಂಬಿಸುವ ಕಾಮಗಾರಿಯು ಪ್ರಸ್ತುತ ಯಾವ ಹಂತದಲ್ಲಿದೆ? ಯೋಜನೆ ಪೂರ್ಣಗೊಂಡ ಪ್ರಯೋಜನ ದೊರೆಯುವುದು ಯಾವಾಗ ಬಿ. ಶಿವಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಕೆ.ಸಿ.ವ್ಯಾಲಿ ಸಂಸ್ಕರಣ ಘಟಕದಿಂದ ಆನೇಕಲ್ ತಾಲ್ಲೂಕಿನ 67 ಕೆರೆಗಳಿಗೆ ತುಂಬಿಸಲಾಗುವುದು. ಇವಲ್ಲದೇ ಕನಕಪುರ ತಾಲ್ಲೂಕಿನ ರಾವುತನಹಳ್ಳ ಮತ್ತು ಮಾವತ್ತೂರು ಕೆರೆಗಳನ್ನು ತುಂಬಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಆನೇಕಲ್ನಲ್ಲಿ ಒಂದು ಮತ್ತು ಮುತ್ತಾನಲ್ಲೂರಿನಲ್ಲಿ ಎರಡು ಪಂಪ್ಹೌಸ್ಗಳನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ಪಂಪ್ಹೌಸ್ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದೆ. ಒಟ್ಟಾರೆ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾನಹಾನಿ ತಡೆ ಕೋರಿ ಕೋರ್ಟ ಮೆಟ್ಟಿಲೇರಿರುವ ಸಚಿವರಿಂದ ಉತ್ತರ ಪಡೆಯಲ್ಲ; ಇಂಥವರಿಂದ ಉತ್ತರ ಪಡೆಯೋದು ಅನೈತಿಕ ಎಂಬ ಪಿ.ಟಿ.ಪರಮೇಶ್ವರ ನಾಯಕ ಅವರ ಮಾತು ಸದನದಲ್ಲಿ ತೀವ್ರ ಕೋಲಾಹಲವನ್ನೆಬ್ಬಿಸಿತು.
ಅಲ್ಲದೇ ಇದೇ ಮೊದಲ ಬಾರಿಗೆ ಸಭಾಪತಿ ತಮ್ಮ ಪೀಠದಿಂದ ಎದ್ದು ಇನ್ನಿಲ್ಲದ ಸಿಟ್ಟಿನಿಂದ ಪರಮೇಶ್ವರ ನಾಯಕ ಅವರನ್ನು ತರಾಟೆಗೆ ತೆಗೆದುಕೊಂಡದ್ದಕ್ಕೂ ಸದನ ಸಾಕ್ಷಿಯಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕುರಿತಾದ ಪ್ರಶ್ನೆಯನ್ನು ಕಾಂಗ್ರೆಸ್ನ ಪರಮೇಶ್ವರ ನಾಯಕ ಕೇಳಿದ್ದರು. ಯೋಜನಾ ಖಾತೆಯನ್ನು ಹೊಂದಿರುವ ಡಾ.ನಾರಾಯಣಗೌಡರು ಉತ್ತರಿಸಲು ಎದ್ದು ನಿಂತಾಗ ಇಂಥ ಸಚಿವರಿಂದ ಉತ್ತರ ಪಡೆಯಲ್ಲ ಎಂದು ಶಾಸಕ ನಾಯಕ ಹೇಳಿದ್ದು ಕಿಡಿ ಹೊತ್ತಿಸಿತು.
ಪರಮೇಶ್ವರ ನಾಯಕರ ಮಾತಿನಿಂದ ಕೆರಳಿದ ಸಂಸದೀಯ ವ್ಯವಹಾರ ಸಚಿವ ಬಸವರಾಜ ಬೊಮ್ಮಾಯಿ `ಶಾಸಕರ ಮಾತು ಸರಿಯಲ್ಲ’ ಎಂದು ಖಂಡಿಸಿದರು. ಪ್ರತಿಯೊಬ್ಬರಿಗೂ ತಮ್ಮ ಮಾನಹಾನಿ ತಡೆ ಕೋರಿ ಕೋರ್ಟಿಗೆ ಹೋಗುವ ಅವಕಾಶ ಇದೆ ಎಂದರು.
ಆದರೂ ಪರಮೇಶ್ವರ ನಾಯಕ `ಸಾಚಾ ಇದ್ದಿದ್ದರೆ ಕೋರ್ಟಿಗೆ ಏಕೆ ಹೋಗುತ್ತಿದ್ದಿರಿ’ ಎಂದು ಕೇಳಿದಾಗ ಗದ್ದಲ ಶುರುವಾಯಿತು. ಪರಮೇಶ್ವರ ನಾಯಕ ಅವರಿಗೆ ಕೂರುವಂತೆ ಪದೇ ಪದೇ ಸೂಚಿಸಿದ್ದು ಪ್ರಯೋಜನ ಆಗದಿದ್ದಾಗ ಸಭಾಧ್ಯಕ್ಷರು ಸಿಟ್ಟಿಗೆದ್ದು ಪೀಠದಿಂದ ಎದ್ದು ನಿಂತರು.
ಸ್ಪೀಕರ್ ಆದ ನಂತರ ಇದೇ ಮೊದಲ ಬಾರಿಗೆ ಎದ್ದು ನಿಂತ ವಿಶ್ವೇಶ್ವರ ಹೆಗಡೆ ಕಾಗೇರಿ, ಲಕ್ಷಾಂತರ ಜನರಿಂದ ಆಯ್ಕೆಯಾಗಿ ಬಂದಿದ್ದೀರಿ. ಪೀಠಕ್ಕೆ ಗೌರವ ಕೊಡಬೇಕು ಎಂಬಷ್ಟು ಜ್ಞಾನ ಇರಲಿ. ನಿಮಗೆ ಪ್ರಶ್ನೆ ಕೇಳುವುದು ಬೇಡವೆಂದಾದರೆ ಬೇಡ. ಕೂತುಕೊಳ್ಳಿ ಎಂದು ನಾನು ಎದ್ದು ನಿಂತು ಹೇಳಿದರೂ ಕೂತುಕೊಳ್ಳುವುದಿಲ್ಲ ಎಂದರೆ ಸದನದ ಬಗ್ಗೆ ನಿಮಗೆ ಗೌರವ ಇಲ್ಲವೇ ಎಂದು ಕೇಳಿದರು.
ಪರಿಸ್ಥಿತಿಯನ್ನು ಗ್ರಹಿಸಿದ ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ ಮಧ್ಯ ಪ್ರವೇಶ ಮಾಡಿದರು. ಸ್ಪೀಕರ್ ಪೀಠಕ್ಕೆ ನೋವಾಗಿದ್ದರೆ ವಿಷಾದಿಸುವುದಾಗಿ ಹೇಳಿದರು. ಪರಮೇಶ್ವರ ನಾಯಕ ಅವರೂ ಕೂಡ ಕ್ಷಮೆ ಕೋರಿದ ನಂತರ ಪರಿಸ್ಥಿತಿ ತಿಳಿಗೊಂಡು ಸದನ ಮುಂದುವರಿಯಿತು. ಪ್ರಶ್ನೋತ್ತರ ಕಲಾಪ ಮುಂದುವರಿದ ನಂತರ ಡಾ.ಯತೀಂದ್ರ ಸಿದ್ದರಾಮುಯ್ಯ ಕೂಡ ಸಚಿವ ನಾರಾಯಣಗೌಡರಿಂದ ಉತ್ತರ ಪಡೆಯಲ್ಲ ಎಂದಷ್ಟೇ ಹೇಳಿ ಕೂತರು.
ಕೋವಿಡ್ ಲಸಿಕೆ ಪಡೆದ ಮರುದಿನವೇ ಸದನಕ್ಕೆ ಬಂದು ಗಮನ ಸೆಳೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು.