ಬೆಳಗಾವಿ: 20- ಸುವರ್ಣ ವಿಧಾನಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಲು ಸರಕಾರ ವಿಫಲವಾದದ್ದನ್ನು ಪ್ರತಿಭಟಿಸಿ ಸೋಮವಾರ ದಿ. 22 ರಂದು 12 ಗಂಟೆಯಿಂದ 1 ಗಂಟೆಯವರೆಗೆ ಸುವರ್ಣಸೌಧದ ಮುಂದೆ ಧರಣಿ ಸತ್ಯಾಗ್ರಹ ಮಾಡಲಿದ್ದೇವೆ. ಮುಖಕ್ಕೆ ಕಪ್ಪು ಬಟ್ಟೆ ಕೈಗೆ ಕಪ್ಪು ಬಟ್ಟೆ ಕಟ್ಟಿ ಸಾಂಕೇತಿಕ ಪ್ರತಿಭಟನೆ ಮಾಡಲಿದ್ದೇವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಉತ್ತರ ಕರ್ನಾಟಕ ಭಾಗದ ಧ್ವನಿಯಾಗಿ ಮಠಾಧೀಶರು, ಸ್ವಾಮಿಜಿಗಳ ನೇತೃದಲ್ಲಿ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಆಡಳಿತಾತ್ಮಕ ಕೇಂದ್ರ ಆಗಬೇಕು ಎಂದು ಪ್ರತಿಭಟನೆ ಮಾಡಿದ್ದೇವೆ. ಆದರೆ ಸರ್ಕಾರದ ಉದಾಸೀನ ಮನೋಭಾವನೆ ಹಾಗೂ ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಇರುವುದು ಮತ್ತು ಉತ್ತರ ಕರ್ನಾಟಕದ ಜನರ ನೋವಿಗೆ ಸ್ಪಂದನೆ ನೀಡದಿರುವುದು ದುರ್ದೈವ ಎಂದರು.
ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾದರೆ ಉತ್ತರ ಕರ್ನಾಟಕದ ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಕೇಂದ್ರ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಅವರು ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲವೆಂದರು.
ಅಧಿಕಾರಕ್ಕಾಗಿ ಉತ್ತರ ಕರ್ನಾಟಕದವರ ಧ್ವನಿ ಆಗುತ್ತಾರೆ. ಆದರೆ ಅಧಿಕಾರ ಬಂದ ಮೇಲೆ ಅದನ್ನು ಮರೆಯುತ್ತಾರೆ. ಸುವರ್ಣ ವಿಧಾನಸೌಧದಲ್ಲಿ ಕಚೇರಿಗಳ ಸ್ಥಳಾಂತರಕ್ಕಾಗಿ ಈಗಾಗಲೇ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆ ಆಗಬೇಕಿತ್ತು. ರಾಜ್ಯ ಮಟ್ಟದ ಕಚೇರಿಗಳ ಸ್ಥಳಾಂತರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹೊಣೆಗಾರಿಕೆಯನ್ನು ಉತ್ತರ ಕರ್ನಾಟಕ ಭಾಗದ ಜನರ ಪ್ರತಿನಿಧಿಗಳು ತೆಗೆದುಕೊಳ್ಳಬೇಕು ಎಂದು ಹೇಳಿದರು.