ಬೆಂಗಳೂರು: 20- ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕನ್ನಡ ಸುದ್ದಿ ವಾಹಿನಿಗಳು “ಸಾಹುಕಾರ”, “ಗೋಕಾಕ ಸಾಹುಕಾರ “, “ಬೆಳಗಾವಿ ಸಾಹುಕಾರ” ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದುದನ್ನು ಪ್ರಶ್ನಿಸಿ ವಕೀಲರೊಬ್ಬರು ಚಾನಲ್ ಗಳಿಗೆ ನೋಟೀಸ ನೀಡಿದ್ದಾರೆ.
ಬೆಳಗಾವಿಯ ಆರು ಜನರ ಪರವಾಗಿ ಸುದ್ದಿ ವಾಹಿನಿಗಳಿಗೆ ವಕೀಲರು ಈ ನೋಟೀಸ ನೀಡಿದ್ದು ರಮೇಶ ಜಾರಕಿಹೊಳಿ ಅವರ ಕುರಿತ ಸುದ್ದಿಗಳನ್ನು ಬಿತ್ತರಿಸುವಾಗ ಸಾಹುಕಾರ, ಗೋಕಾಕ ಸಾಹುಕಾರ ಎಂದು ವೈಭವೀಕರಿಸುತ್ತಿರುವುದು ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ. ನಾವ್ಯಾರೂ ಅವರಿಂದ ಸಾಲ ಪಡೆದಿಲ್ಲ. ಹಾಗಾಗಿ ಅವರು ಸಾಹುಕಾರ ಆಗಲು ಸಾಧ್ಯವಿಲ್ಲ. ಈ ರೀತಿ ಪದಗಳನ್ನು ಬಳಸಿ ವೈಭವೀಕರಿಸಿ ಜನರ ತೇಜೋವಧೆ ಮಾಡಲಾಗುತ್ತಿದೆ. ಹಾಗಾಗಿ ಸುದ್ದಿ ಪ್ರಸಾರದ ವೇಳೆ ಸಾಹುಕಾರ ಪದ ಬಳಕೆ ಅನವಶ್ಯಕ ಎಂದು ನೋಟೀಸ್ ನಲ್ಲಿ ವಿವರಿಸಲಾಗಿದೆ.
ತಕ್ಷಣ ಇಂಥ ಪದ ಬಳಕೆ ನಿಲ್ಲಿಸಬೇಕು. ಇಲ್ಲದಿದ್ದರೆ ಅಂತಹ ಚಾನಲ್ ಗಳ ವಿರುದ್ಧ ಕಾನೂನು ರೀತಿ ಕ್ರಮಕ್ಕೆ ಮುಂದಾಗುವುದಾಗಿ ನೋಟೀಸನಲ್ಲಿ ಎಚ್ಚರಿಸಲಾಗಿದೆ.