ಬೆಂಗಳೂರು, ಮಾ 25 – ಕೋವಿಡ್ನ ಎರಡನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅತ್ಯಂತ ವೈಜ್ಞಾನಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಜನರನ್ನು ಹೆಚ್ಚು ಭೀತಿಗೆ ಒಳಪಡಿಸದೇ ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸದೆ ಜನರು ವೈಜ್ಞಾನಿಕವಾಗಿ ನಡೆದುಕೊಳ್ಳುವಂತೆ ತಿಳುವಳಿಕೆಯನ್ನು ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕಡ್ಡಾಯವಾಗಿ ಮಾಸ್ಕ್ ಧರಿಸುವ, ಸ್ಯಾನಿಟೈಸರ್ ಬಳಸುವ, ಸಣ್ಣ ರೋಗ ಲಕ್ಷಣಗಳು ಕಂಡು ಬಂದರೂ ಜನರೊಂದಿಗೆ ಬೆರೆಯದೆ ಪ್ರತ್ಯೇಕವಾಗಿ ಉಳಿಯುವ, ಪರೀಕ್ಷೆ ಮಾಡಿಸಿಕೊಳ್ಳುವ ಮುಂತಾದವುಗಳನ್ನು ಸ್ವಯಂಪ್ರೇರಿತವಾಗಿ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದ್ದಾರೆ.
ಸರ್ಕಾರ ಕೋವಿಡ್ ಸಾವುಗಳ ವಿಚಾರದಲ್ಲೂ ಕೂಡ ಸುಳ್ಳು ಹೇಳುತ್ತಿದೆ. ಇದುವರೆಗೂ ರಾಜ್ಯದಲ್ಲಿ 12,449 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಸಾಂಖ್ಯಿಕ ಇಲಾಖೆಯು ಸಂಗ್ರಹಿಸುವ ಜನನ, ಮರಣಗಳ ಅಂಕಿ ಅಂಶಗಳ ಪ್ರಕಾರ ಸಾವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ರಾಜ್ಯದಲ್ಲಿ ಕೊರೋನಾ ಸಾವುಗಳ ಪ್ರಮಾಣ ಶೇ.1.4 ರಷ್ಟು ಇದೆ. ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಕೊರೋನಾ ಸಾವುಗಳಲ್ಲಿ ರಾಜ್ಯವು ದೇಶದಲ್ಲಿ 19ನೇ ಸ್ಥಾನದಲ್ಲಿದೆ ಎಂದು ಹೇಳುತ್ತಿದೆ. ಆದರೆ ಡಿಸೆಂಬರ್ ಅಂತ್ಯದವರೆಗಿನ ಮಾಹಿತಿಯನ್ನು ನೋಡಿದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಸುಮಾರು ಶೇ.2.6 ರಷ್ಟಿದೆ. ಇದರಿಂದಾಗಿ ದೇಶದಲ್ಲಿ ಕೋವಿಡ್ ಕಾರಣದಿಂದಾಗಿ ಅತಿ ಹೆಚ್ಚು ಮರಣ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕವು ಪಂಜಾಬ್ ನಂತರದ 2ನೇ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ ಕೊರೋನಾ ಸಂಬಂಧಿತ ಸಾವುಗಳು ಕಡಿಮೆಯಾಗಿಲ್ಲ. ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟು ಸುಳ್ಳು ಲೆಕ್ಕ ತೋರಿಸಿ ಜನರನ್ನು ಯಾಮಾರಿಸುತ್ತಿದೆ. ಸಾವುಗಳನ್ನು ಬಚ್ಚಿಟ್ಟು ಸುಳ್ಳು ಹೇಳುವುದು ಸರ್ಕಾರದ ಅಮಾನವೀಯ ನಿಲುವು ಮತ್ತು ನಂಬಿಕೆ ದ್ರೋಹವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರವು ಇನ್ನೂ ಎಚ್ಚೆತ್ತುಕೊಂಡಿಲ್ಲ. ಟೆಸ್ಟ್ಗಳ ಸಂಖ್ಯೆಯನ್ನು ಹೆಚ್ಚು ಮಾಡಿಲ್ಲ. ಮಾ. 21ರಂದು 78,178 ಜನರ ಪರೀಕ್ಷೆ ಮಾಡಲಾಗಿದೆ. ಮಾ. 23 ರಂದು 98,733 ಜನರ ಪರೀಕ್ಷೆಗಳನ್ನು ನಡೆಸಲಾಗಿದೆ. ಇದು ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪರೀಕ್ಷೆಗಳ ಪ್ರಮಾಣ ಬಹಳ ಕಡಿಮೆ ಇದೆ. ದೆಹಲಿಯಲ್ಲಿ ಒಂದು ಮಿಲಿಯನ್ ಜನಕ್ಕೆ 8.34 ಲಕ್ಷ ಟೆಸ್ಟ್ಗಳನ್ನು ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 4.62 ಲಕ್ಷ ಟೆಸ್ಟ್ಗಳನ್ನು ಮಾಡಲಾಗಿದೆ. ಕೇರಳದಲ್ಲಿ 3.04 ಲಕ್ಷ ಟೆಸ್ಟ್ಗಳನ್ನು ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಇದುವರೆಗೆ ಕೇವಲ 2.93 ಲಕ್ಷ ಟೆಸ್ಟ್ಗಳನ್ನು ಮಾಡಲಾಗಿದೆ. ನನಗಿರುವ ಮಾಹಿತಿಯಂತೆ ಈ ಟೆಸ್ಟ್ಗಳ ಸಂಖ್ಯೆಯನ್ನು ಕೂಡ ಉತ್ಪ್ರೇಕ್ಷಿಸಿ ಹೇಳಲಾಗುತ್ತಿದೆ. ಒಬ್ಬರಿಗೆ ಟೆಸ್ಟ್ ಮಾಡಿ 3-4 ಜನರಿಗೆ ಟೆಸ್ಟ್ ಮಾಡಿದ್ದೇವೆ ಎಂದು ಕೆಲವು ಖಾಸಗಿ ಲ್ಯಾಬೊರೇಟರಿಗಳು ಸುಳ್ಳು ಬಿಲ್ಲುಗಳನ್ನು ಕ್ಲೇಮು ಮಾಡಿಕೊಂಡಿವೆ ಎಂಬ ಮಾಹಿತಿ ಇದೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ಹೊರ ಬರಲಿದೆ. ಕೋವಿಡ್ ಭ್ರಷ್ಟಾಚಾರದ ಬಗ್ಗೆ ಕೂಡ ಸರ್ಕಾರ ತನಿಖೆ ಮಾಡಿಸಲಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಜನರ ಆರೋಗ್ಯವನ್ನು ರಕ್ಷಿಸುವ ಜೊತೆಯಲ್ಲಿಯೇ ಅವರ ಆರ್ಥಿಕ ಆರೋಗ್ಯವನ್ನು ಕೂಡ ರಕ್ಷಿಸಬೇಕಾಗಿದೆ. ಇಲ್ಲದಿದ್ದರೆ ಇಡೀ ದೇಶದ ಆರ್ಥಿಕ ಚೈತನ್ಯಕ್ಕೆ ಲಕ್ವಾ ಹೊಡೆದಂತಾಗುತ್ತದೆ. ಈಗಾಗಲೇ ನಮ್ಮ ಆರ್ಥಿಕತೆ ಐ.ಸಿ.ಯು.ಗೆ ಹೋದ ರೋಗಗ್ರಸ್ಥನಂತಾಗಿದೆ. ಸರ್ಕಾರ ತಜ್ಞರ, ಮುತ್ಸದ್ದಿಗಳೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು.