ರಾಕೇಶ ಟಿಕಾಯತ್ ಕರ್ನಾಟಕಕ್ಕೆ ಬಂದು ಹೋದರು. ಹಾವೇರಿ ಮತ್ತು ಶಿವಮೊಗ್ಗಗಳಲ್ಲಿ ರೈತ ಪಂಚಾಯತ್ ಸಭೆಗಳಲ್ಲಿ ಭಾಗವಹಿಸಿದ್ದರು. ಕೊನೆ ಘಟ್ಟದಲ್ಲಿ ಬೆಂಗಳೂರಿಗೆ ಹೋಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಹಜವಾಗಿಯೇ ಹಿಂದಿನ ರೈತ ಚಳವಳಿ ನೆನಪಾಗುತ್ತದೆ. ಆಗ ಕರ್ನಾಟಕ ರೈತ ಸಂಘದ ನಾಯಕರಾಗಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ‘ಬೆಂಗಳೂರು ಚಲೋ’ಗೆ ಕರೆ ನೀಡಿದರೆ ರೈತರು ಸಾಗರೋಪಾದಿಯಲ್ಲಿ ಬರುತ್ತಿದ್ದರು. ಬೆಂಗಳೂರು ನಗರದ ಪೊಲೀಸರಿಗೆ ಮತ್ತು ರಾಜಕಾರಣಿಗಳಿಗೆ ನಡುಕ ಹುಟ್ಟುತ್ತಾ ಇತ್ತು. ಮಾಧ್ಯಮಗಳು ರೈತ ಹೋರಾಟದ ಸಂಗತಿಗಳಿಗೆ ಆದ್ಯತೆ ನೀಡುತ್ತಿದ್ದವು. ರೈತರ ಬೆಂಗಳೂರು ಆಗಮನಕ್ಕೆ ಆಗ ಇದ್ದ ಗುಂಡೂರಾವ ಸರ್ಕಾರ ತಡೆ ತರಲು ಯತ್ನಿಸಿದಾಗ ಪ್ರಮುಖ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿಯೇ ಸಂಪಾದಕೀಯ ಪ್ರಕಟಿಸಿತ್ತು. ಅದರ ಶೀರ್ಷಿಕೆ ‘ರೈತರು ಬರುವರು ದಾರಿ ಬಿಡಿ’. ಈಗ ಕಾಲ ಬದಲಾಗಿದೆ, ರೈತರ ಸಮಸ್ಯೆಗಳು ಮಾತ್ರ ಹಾಗೇ ಉಳಿದುಕೊಂಡಿವೆ. ಆದರೆ ಈಗಿನ ಹೆಚ್ಚಿನ ಮಾಧ್ಯಮಗಳಿಗೆ ಸತ್ಯ ಮತ್ತು ರೈತ, ಜನಸಾಮಾನ್ಯರ ವಿಷಯಗಳು ಬೇಕಿಲ್ಲ. ಅವುಗಳೆಲ್ಲ ಕಾರ್ಪೋರೇಟ ಕಂಪನಿಗಳ ಬಾಲಬಡಕರಾಗಿ ಕಾರ್ಯ ನಿರ್ವಹಿಸುತ್ತಿವೆ.
ಕರ್ನಾಟಕ ಪ್ರವಾಸದ ಕೊನೆಯ ಘಟ್ಟದಲ್ಲಿ ಬೆಂಗಳೂರಿಗೆ ಬಂದ ರಾಕೇಶ ಟಿಕಾಯತ್ ಇಳಿದುಕೊಂಡಿದ್ದು ಪ್ರೊ. ನಂಜುಂಡಸ್ವಾಮಿ ಮನೆಯಲ್ಲಿ. ಆ ಮನೆಗೂ ಟಿಕಾಯತ್ ಕುಟುಂಬಕ್ಕೂ ನಲವತ್ತು ವರ್ಷಗಳಿಗೂ ಮೀರಿದ ನಂಟು ಇದೆ. ಆಗ ಭಾರತೀಯ ಕಿಸಾನ್ ಯುನಿಯನ್ ನೇತೃತ್ವ ವಹಿಸಿದ್ದವರು ರಾಕೇಶ ಅವರ ತಂದೆ ಮಹೇಂದ್ರಸಿಂಗ್ ಟಿಕಾಯತ್. ಅವರು ಎಷ್ಟೋ ಸಲ ಬೆಂಗಳೂರಿಗೆ ಬಂದು ನಂಜುಂಡಸ್ವಾಮಿ ಅವರೊಂದಿಗೆ ಇರುತ್ತಿದ್ದರು. ಆ ಸಮಯದಲ್ಲಿ ಚಿಕ್ಕವರಾಗಿದ್ದ ರಾಕೇಶ ಕೂಡ ಇರುತ್ತಿದ್ದರು. ಅವರು ಇಳಿದುಕೊಳ್ಳುತ್ತಿದ್ದ ಕೋಣೆ ಪ್ರೊಫೆಸರ್ ಅವರ ಅಧ್ಯಯನ ಕೊಠಡಿ. ಅಲ್ಲಿ ಸದಾ ಪುಸ್ತಕಗಳು ತುಂಬಿರುತ್ತಿದ್ದವು. ಅದೇ ಕೋಣೆಯಲ್ಲಿ ಇಳಿದುಕೊಂಡ ರಾಕೇಶ ಸ್ವಲ್ಪ ಮಾತುಕತೆ ಆಡುವಾಗ ಒಂದು ಸಂಗತಿ ತಿಳಿಸಿದರು. ಪ್ರೊಫೆಸರ್ಗೆ ಕನ್ನಡ, ಇಂಗ್ಲೀಷ ಬಿಟ್ಟು ಹಿಂದಿ ಬರುತ್ತಿರಲಿಲ್ಲ. ಮಹೇಂದ್ರ ಸಿಂಗ್ ಅವರಿಗೆ ಹಿಂದಿ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಅವರ ಸಂವಹನ ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಕೇಶ ಹೇಳಿದ್ದು; “ರೈತ ರೈತರ ನಡುವೆ ಸಂವಹನಕ್ಕೆ ಭಾಷೆ ಬೇಕಿಲ್ಲ, ಭಾವನೆಗಳು ಸಾಕು”.
ಇದು ಮಹತ್ವದ ಸಂಗತಿ ಎನ್ನಿಸುತ್ತದೆ. ಕರ್ನಾಟಕದಲ್ಲಿ ರೈತ ಚಳವಳಿ ಬಲವಾಗಿದ್ದ ಕಾಲಕ್ಕೆ ಕೆಲವು ಪ್ರಮುಖ ಹೋರಾಟಗಾರರು ಮುಂಚೂಣಿಯಲ್ಲಿ ಇದ್ದರು. ಹಳೇ ಮೈಸೂರ ಭಾಗದಲ್ಲಿ ನಂಜುಂಡಸ್ವಾಮಿ, ಮಲೆನಾಡು ಭಾಗದಿಂದ ನಿದಿಗೆ ರುದ್ರಪ್ಪ, ಚಿಕ್ಕಮಗಳೂರು ಭಾಗದಿಂದ ಸುಂದರೇಶ ಮತ್ತು ಉತ್ತರ ಕರ್ನಾಟಕ ಭಾಗದಿಂದ ಬಾಬಾಗೌಡ ಪಾಟೀಲ. ಎಲ್ಲರೂ ರೈತರ ನಿಜ ಪ್ರತಿನಿಧಿಗಳ ಹಾಗೆ ಕಾಣುತ್ತಿದ್ದರು. ಎಲ್ಲರೂ ಒಟ್ಟಿಗೆ ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಹಾಗಾಗಿಯೇ ಅಂದು ರೈತ ಚಳವಳಿ ಯಶಸ್ವಿ ಆಯಿತು.
ಈಗಿನ ಸ್ಥಿತಿ ಪರಿಶೀಲಿಸಿದರೆ, ರೈತರಲ್ಲಿ ಒಗ್ಗಟ್ಟು ಇಲ್ಲದಿರುವುದು ಪ್ರಮುಖ ಸಂಗತಿ ಆಗಿ ಗೋಚರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಲಾಭದಾಯಕ ಬೆಳೆ ಈಗಿನ ರೈತರ ಆದÀ್ಯತೆ. ಇಂಥ ಆಸೆಯ ಪರಿಣಾಮ ಕೊಡಗು, ಚಿಕ್ಕಮಗಳೂರಲ್ಲಿ ದೊಡ್ಡ ದೊಡ್ಡ ಎಸ್ಟೇಟಗಳೆಲ್ಲ ಇಂದು ನಮ್ಮವರ ಕೈ ತಪ್ಪಿ ಕಾರ್ಪೋರೇಟ್ ಕಂಪನಿಗಳ ಮತ್ತು ಹೊರ ರಾಜ್ಯಗಳ ಶ್ರೀಮಂತರ ಪಾಲಾಗಿರುವುದನ್ನು ಕಾಣುತ್ತೇವೆ. ರಾಜ್ಯದ ಸಣ್ಣ ರೈತರಂತೂ ಅದು ಹೇಗೋ ಜೀವ ಬಿಗಿ ಹಿಡಿದು ಬದುಕಿದ್ದಾರೆ. ಎಲ್ಲಕ್ಕಿಂತ ಬಹಳ ದೊಡ್ಡ ಕೊರತೆ ಎಂದರೆ, ರಾಜ್ಯದ ರೈತ ಸಂಘಟನೆಗಳ ನಾಯಕರಲ್ಲಿ ಹೊಂದಾಣಿಕೆಯೇ ಇಲ್ಲದಿರುವುದು. ಜೊತೆಗೆ ರೈತ ಚಳವಳಿ ನಡೆಸಲು ಬೇಕಾದ ಸಮಗ್ರ ದೃಷ್ಟಿ ಯಾವ ನಾಯಕರಲ್ಲೂ ಕಂಡು ಬರುತ್ತಿಲ್ಲ.
ಈ ಹಿನ್ನೆಲೆಯಲ್ಲಿ ರಾಕೇಶ ಟಿಕಾಯತ್ ಅವರ ಮಾತು ಗಮನಾರ್ಹ. ಒಂದೆಡೆ ಇಡೀ ದೇಶದ ರೈತರನ್ನು ಒಟ್ಟುಗೂಡಿಸುವ ಕೆಲಸ ಮತ್ತು ಶಾಸನ ತೆರವುಗೊಳಿಸಲು ಬೃಹತ್ ಆಂದೋಲನ. ಅದಕ್ಕೆ ಪುಷ್ಟಿ ನೀಡಲು ಇಡೀ ದೇಶದ ತುಂಬಾ ಓಡಾಡುತ್ತಾ ತಮ್ಮ ನಿಲುವು ಪ್ರಚಾರ ಮಾಡುತ್ತಾ ಇರುವ ರಾಕೇಶ ಅವರಿಗೆ ಕರ್ನಾಟಕದಲ್ಲಿ ಸಿಕ್ಕಿದ್ದು ಭರ್ಜರಿ ಸ್ವಾಗತ ಅಲ್ಲ. ಅದಕ್ಕೆ ಎರಡು ಕಾರಣ; ನಮ್ಮ ಜನರಿಗೆ ಹೊಸ ಶಾಸನದ ಪರಿಣಾಮ ಏನಾದೀತು ಎಂದು ಇನ್ನೂ ಅರಿವಿಲ್ಲ, ಹಾಗೇ ಇಲ್ಲಿ ಬಿಜೆಪಿ ಆಡಳಿತದ ಸರ್ಕಾರ ಇದೆ. ಒಂದು ಹಂತದಲ್ಲಿ ಶಿವಮೊಗ್ಗದ ಪಂಚಾಯತ್ ಸಭೆಗೆ ಅಡ್ಡಿ ಉಂಟು ಮಾಡುವ ವಿಚಾರವೂ ಇತ್ತು. ಆದರೆ ಅಧಿವೇಶನ ನಡೆಯುತ್ತಾ ಇದ್ದುದರಿಂದ ಆ ಸಾಹಸಕ್ಕೆ ಸರ್ಕಾರ ಹೋಗಲಿಲ್ಲ.
ಹಾಗಾದರೆ ಟಿಕಾಯತ್ ಬಂದು ಹೋದದ್ದರಿಂದ ರಾಜ್ಯದ ರೈತರಿಗೆ ಏನು ಲಾಭ ಎಂದು ಪ್ರಶ್ನಿಸುವುದು ಸಹಜ. ಈಗ ದೆಹಲಿಯಲ್ಲಿ ಸಂಪು ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರವನ್ನು ಮಣಿಸುವುದು ಖಚಿತ. ಹಾಗಾದಾಗ, ನಮ್ಮಲ್ಲಿ ಕೂಡ ಒಗ್ಗೂಡಿ ಹೋರಾಡಿದರೆÉ ಜಯ ಖಚಿತ ಎನ್ನುವ ಭಾವನೆ ಮೂಡುತ್ತದೆ. ಆಗ ರೈತ ಸಂಘಟನೆ ಬಲಗೊಳ್ಳುತ್ತದೆ. ರಾಜಕೀಯದ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿರುವ ರೈತರು, ಅದರಿಂದ ಹೊರ ಬಂದು ತಮ್ಮದೇ ಹೋರಾಟ ನಡೆಸಬೇಕು. ಸರ್ಕಾರಗಳು ಆಗಾಗ ತೋರುವ ಅಷ್ಟಿಷ್ಟು ರಿಯಾಯತಿಗಳಿಂದ ಏನೂ ಉಪಯೋಗ ಇಲ್ಲ ಎಂದು ಅರಿಯಬೇಕು. ಮುಖ್ಯವಾಗಿ ರೈತರು ಒಂದುಗೂಡುವುದನ್ನೇ ಸಹಿಸದ ರಾಜಕೀಯ ಮಂದಿ, ಅವರನ್ನು ಕೇವಲ ದಾಳವಾಗಿ ಬಳಸುತ್ತಿದ್ದಾರೆ. ಹಸಿರು ಶಾಲು ಹೊದ್ದವರೆಲ್ಲ ರೈತರು ಎಂಬ ಭ್ರಮೆಯಲ್ಲಿ ನಮ್ಮ ಹಳ್ಳಿಗಳ ಜನರು ಯಾರು ಯಾರನ್ನೋ ಮೇಲೆತ್ತಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ.
ಇದೆಲ್ಲ ಅರ್ಥ ಆಗಬೇಕಾದರೆ ಕೆಲವು ಕಾಲ ಬೇಕು. ಮುಖ್ಯವಾಗಿ ದೆಹಲಿಯಲ್ಲಿ ನಡೆಯುತ್ತಿರುವ ಸಂಪು ಗೆಲುವು ಸಾಧಿಸಬೇಕು. ಅಲ್ಲಿಯವರೆಗೆ ರೈತರ ಸ್ಮಾರಕಕ್ಕೆ ರಾಜ್ಯದಿಂದ ಮಣ್ಣು ಸಂಗ್ರಹಿಸಿ ಕಳುಹಿಸುವುದು ಕೇವಲ ಸಂಕೇತ ಮಾತ್ರ. ಎಲ್ಲಿಯವರೆಗೆ ರೈತರು ಒಂದುಗೂಡಿ ತಮ್ಮ ಸಮಸ್ಯೆ ಪರಿಹಾರಕ್ಕೆ ಬಲವಾಗಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಅವರೆಲ್ಲ ಹೀಗೇ ಒದ್ದಾಡುತ್ತಾ ಇರುತ್ತಾರೆ. ಈ ಸಂದರ್ಭದಲ್ಲಿ ಟಿಕಾಯತ್ ಹೇಳಿದ ‘ರೈತರ ನಡುವೆ ಭಾವನಾತ್ಮಕ ಸಂವಹನ’ ಮುಖ್ಯ.