ಬೆಳಗಾವಿ: ಮಾ.30- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಹೇಳಿದಂತೆ ಯಾರ್ಯಾರ ಸಿಡಿ ಇದೆಯೋ ಅದೆಲ್ಲ ಬಿಡುಗಡೆಯಾಗಲಿ. ಕಾಗೆ ಹಾರಿಸುವ ಕೆಲಸ ಮಾತ್ರ ಆಗಬಾರದು ಎಂದು ಕೇಂದ್ರ ಸಚಿವ ಬಿಜೆಪಿ ಮುಖಂಡ ಪ್ರಹ್ಲಾದ ಜೋಷಿ ಮಾರ್ಮಿಕವಾಗಿ ನುಡಿದಿದ್ದಾರೆ.
ಯಡಿಯೂರಪ್ಪ ಅವರದ್ದೂ ಸಿಡಿ ಇದೆ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾದ ಜೋಷಿ, ಯಡಿಯೂರಪ್ಪ ನವರೇ ಯಾರ ಸಿಡಿ ಇದೆಯೋ ಬಿಡುಗಡೆ ಆಗಲಿ ಎಂದಿದ್ದಾರೆ. ಹೀಗಾಗಿ ಯಾರದ್ದೇ ಸಿಡಿ ಇದ್ದರೂ ಬಿಡುಗಡೆಯಾಗಲಿ ಎಂದರು.
ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಪ್ರಹ್ಲಾದ್ ಜೋಷಿ ಸೈಡ್ ಆ್ಯಕ್ಟರ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪ್ರಹ್ಲಾದ ಜೋಷಿ, ಪ್ರಧಾನಿ ಮೋದಿಯವರ ಆಡಳಿತವನ್ನು ಜನರೇ ಮೆಚ್ಚಿದ್ದು, 58 ಚುನಾವಣೆಗಳಲ್ಲಿ ಬಿಜೆಪಿ ಈಗಾಗಲೇ 41ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಉಪಚುನಾವಣೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ. ಸಿದ್ದರಾಮಯ್ಯ ನವರಿಗೆ ಏನೂ ಕೆಲಸ ಇಲ್ಲ. ಮೋದಿಯವರ ನಿರ್ದೇಶನದಲ್ಲಿ ಕೆಲಸ ಮಾಡಲು ಹೆಮ್ಮೆ ಪಡುತ್ತೇವೆ. ಕಾಂಗ್ರೆಸ್ ನದ್ದು ಒಂದು ಕುಟುಂಬ ಒಂದು ಪಕ್ಷ ಒಂದು ರಾಷ್ಟ್ರ. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ಬಿಟ್ಟರೂ ಅವರೇ ಮತ್ತೆ ಉಪಾಧ್ಯಕ್ಷರಾಗುತ್ತಾರೆ ಎಂದು ಲೇವಡಿ ಮಾಡಿದರು.