ಬೆಂಗಳೂರು,ಏ.6- ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣಾ ಕಣ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಹಾಗೂ ಸುರೇಶ ಅಂಗಡಿ ಪತ್ನಿ ಮಂಗಳಾ ಪರ ಮತಯಾಚನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಖಾಡ ಪ್ರವೇಶಿಸಲಿದ್ದಾರೆ.
ಏ.7 ರಂದು ಬೆಳಗಾವಿಯಲ್ಲಿ ಮಂಗಳಾ ಪರ ಯಡಿಯೂರಪ್ಪ ಪ್ರಚಾರ ಮಾಡಲಿದ್ದು, ಮಂಗಳವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಅವರು ಬೆಳಗಾವಿಗೆ ಸಂಜೆ ತೆರಳಿ, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಬೆಳಗಾವಿಗೆ ಪ್ರಯಾಣ ಬೆಳೆಸಲಿರುವ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಬುಧವಾರ ರಾಮದುರ್ಗ, ಸವದತ್ತಿ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಜಿಲ್ಲಾ ಬಿಜೆಪಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಬುಧವಾರ ರಾತ್ರಿ ಬೆಳಗಾವಿಯಿಂದ ಬೆಂಗಳೂರಿಗೆ ಮುಖ್ಯಮಂತ್ರಿ ವಾಪಸ್ಸಾಗಲಿದ್ದಾರೆ.