ನವದೆಹಲಿ, ಜನವರಿ 11- ಕೇಂದ್ರದ ಕೃಷಿ ಸುಧಾರಣಾ ಕಾಯಿದೆ, ರೈತರ ಪ್ರತಿಭಟನೆ ಸಂಬಂಧಿಸಿದಂತೆ ಸಲ್ಲಿಸಲಾದ ಮನವಿ ಕುರಿತ ವಿಚಾರಣೆ ಸುಪ್ರೀಮ ಕೋರ್ಟನಲ್ಲಿ ಸೋಮವಾರ ನಡೆಯಲಿದ್ದು, ಸಹಜವಾಗಿ ಎಲ್ಲರ ಚಿತ್ತ ಕೋರ್ಟನತ್ತ ನೆಟ್ಟಿದೆ.
ಮೂರು ಹೊಸ ಕೃಷಿ ಕಾನೂನುಗಳನ್ನು ಸರ್ಕಾರ ರದ್ದುಪಡಿಸುವವರೆಗೂ ತಮ್ಮ ಹೋರಾಟ, ಪ್ರತಿಭಟನೆ ಮುಂದುವರಿಸುವುದಾಗಿ ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ. ಇಂತಹ ಪರಿಸ್ಥಿತಿಯಲ್ಲಿ, ಇಂದಿನ ವಿಚಾರಣೆ ಮಹತ್ವ ಪಡೆದಿದೆ.
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಸುಮಾರು 50 ದಿನಗಳಿಂದ ನಡೆಯುತ್ತಿದೆ. ಜನವರಿ 7 ರಂದು ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ 8 ಸುತ್ತು ಮಾತುಕತೆ ನಡೆದರೂ ಇವರೆಗೆ ಯಾವುದೆ ಪರಿಹಾರ ದೊರಕಿಲ್ಲ, ಬಿಕ್ಕಟ್ಟು ಬಗೆಹರಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದೆ 15 ರಂದು ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಮಮತ್ತೊಂದು ಸಭೆ ಸಭೆ ನಡೆಯಲು ನಿಗದಿಯಾಗಿದೆ.
ಸುಪ್ರೀಂ ಕೋರ್ಟನಲ್ಲಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ನಡೆಸಲಿದೆ.
ಹಿಂದಿನ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟನಲ್ಲಿ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವಿನ ಎಲ್ಲಾ ವಿಷಯಗಳು ಚರ್ಚೆಯಲ್ಲಿವೆ ಎಂದು ಸರ್ಕಾರ ಹೇಳಿದ್ದು, ಶೀಘ್ರದಲ್ಲೇ ಸರ್ಕಾರ ಮತ್ತು ರೈತರ ನಡುವೆ ಸಂಧಾನ ಫಲಪ್ರದವಾಗಿ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಸರ್ಕಾರ ಹೇಳಿದೆ.