ಬೆಂಗಳೂರು,ಜ 10- ಸಚಿವ ಸಂಪುಟ ವಿಸ್ತರಣೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡಿದ್ದು ಜ 13ರಂದು ನೂತನ ಸಚಿವರಾಗಿ 7 ಜನರು ಸಂಪುಟ ಸೇರ್ಪಡೆಯಾಗಲಿದ್ದಾರೆ. ಸಂಪುಟಕ್ಕೆ ಸೇರ್ಪಡೆಯಾಗಲಿರುವವರ ಹೆಸರನ್ನು ನಾಳೆ ಬಹಿರಂಗಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗೆ ಪಕ್ಷದ ವರಿಷ್ಠರು ದೂರ ವಾಣಿ ಕರೆ ಮಾಡಿ 7 ಜನರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಜ 14ರಂದು ಸಂಕ್ರಾತಿ ಹಬ್ಬದ ಹಿನ್ನಲೆಯಲ್ಲಿ ಜ 13ರಂದು ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಯಾರೆಲ್ಲಾ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬುದನ್ನು ಸೋಮವಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಆಮೂಲಕ ಹಲ ವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ರಚನೆಗೆ ಕಾಡಿ ಬೇಡಿ ಹೈಕಮಾಂಡ್ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಸಚಿವ ಸಂಪುಟದಲ್ಲಿ ಖಾಲಿ 5 ಸ್ಥಾನಗಳಿದ್ದು ಎರಡು ಅಥವಾ ಮೂವರು ಸಚಿವರನ್ನು ಕೈಬಿಟ್ಟು ಉಳಿದವರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಹಾಗೂ ಹೈಕಮಾಂಡ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಶಶಿಕಲಾ ಜೊಲ್ಲೆ, ಕೆ.ಎಸ್.ಈಶ್ವರಪ್ಪ, ಜಗದೀಶ ಶೆಟ್ಟರ್ , ಸಿ.ಸಿ.ಪಾಟೀಲ ಅವರನ್ನು ಕೈಬಿಟ್ಟು ಎಂಟಿಬಿ ನಾಗರಾಜ, ಆರ್.ಶಂಕರ, ಮುನಿರತ್ನಾ, ಉಮೇಶ ಕತ್ತಿ, ಸಿ.ಪಿ,ಯೋಗೇಶ್ವರ, ಅರವಿಂದ ಲಿಂಬಾವಳಿ,ಸುನೀಲ ಕುಮಾರ ಕಾರ್ಕಳ, ಹಾಲಪ್ಪ ಆಚಾರ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಕ್ಷದ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ ಶಾ,ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಭೇಟಿ ವೇಳೆ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಗ್ರಾಮ ಪಂಚಾಯತ ಚುನಾವಣೆ ಫಲಿತಾಂಶ, ಉಪ ಚುನಾವಣಾ ತಯಾರಿ,ಪಕ್ಷದ ಸಂಘಟನೆ ಸೇರಿದಂತೆ ರಾಜ್ಯ ರಾಜಕೀಯ ವಿದ್ಯಮಾನ, ಮುಖ್ಯಮಂತ್ರಿ ಅವರ ಮೇಲಿರುವ ಕೋರ್ಟ್ ಪ್ರಕರಣಗಳು ಹಾಗೂ ಪುತ್ರನ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ವರಿಷ್ಠರು ಮುಖ್ಯಮಂತ್ರಿ ಯಿಂದ ಸ್ಪಷ್ಟನೆ ಪಡೆದರು ಎನ್ನಲಾಗಿದೆ.
ಭೇಟಿ ವೇಳೆ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ನಾಯಕತ್ವ ಬದಲಾವಣೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಹುದ್ದೆ ತ್ಯಜಿಸಿದರೆ ಪರ್ಯಾಯವಾಗಿ ಮಗನನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೇ, ಯಡಿಯೂರಪ್ಪ ಅವರಿಗೂ ರಾಜ್ಯಪಾಲರ ಹುದ್ದೆ ನೀಡುವ ಭರವಸೆ ಕೊಟ್ಟಿದ್ದಾರೆ. ಮುಂದಿನ ಮೂರು ನಾಲ್ಕು ದಿನದಲ್ಲಿ ನಿಮ್ಮ ನಿರ್ಧಾರ ತಿಳಿಸುವಂತೆಯೂ ಯಡಿಯೂರಪ್ಪ ಅವರಿಗೆ ಅಮಿತ ಷಾ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಅಮಿತ ಶಾ ಮಾತಿನಿಂದ ಮುಖ್ಯಮಂತ್ರಿ ಆತಂಕಗೊಂಡಿದ್ದು ಅಮಿತ ಶಾ ನಿವಾಸದಿಂದ ತೆರಳುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹಾಗೆ ತೆರಳಿದರು.
ಬಳಿಕ ಪುತ್ರ ವಿಜಯೇಂದ್ರ ಜೊತೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಾಯಕತ್ವ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ.ಆ ಗೊಂದಲ ಇರುವುದು ಮಾಧ್ಯಮದಲ್ಲಿ ಮಾತ್ರ ಎಂದಷ್ಟೇ ಹೇಳುವ ಮೂಲಕ ಆತಂಕವನ್ನು ವ್ಯಕ್ತಪಡಿಸದೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದೂವರೆ ವರ್ಷದಿಂದ ಮುಂದೂಡಲ್ಪಡುತ್ತಲೇ ಇತ್ತು.ಒಂದೆಡೆ ಸಚಿವಾಕಾಂಕ್ಷಿಗಳ ಸಂಖ್ಯೆ ಏರುತ್ತಿದ್ದರೆ,ಮತ್ತೊಂದೆಡೆ ಬಿಜೆಪಿ ಹೈಕಮಾಂಡ ಈ ವರೆಗೆ ಸಂಪುಟವನ್ನು ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವಕಾಶ ನೀಡಿರಲಿಲ್ಲ. ಇಂದು ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.