ಮೈಸೂರು, ಜ 11 – ಗ್ರಾಮರಾಜ್ಯದ ಮೂಲಕ ರಾಮರಾಜ್ಯ ನಿರ್ಮಾಣ ಮಾಡುವ ಸಂಕಲ್ಪವನ್ನು ಬಿಜೆಪಿ ಹೊಂದಿದೆ. ಈ ಮೂಲಕ ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸು ಮಾಡುತ್ತೇವೆ. ಗ್ರಾಮೀಣ ಭಾಗದ ಅಭಿವೃದ್ಧಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮೈಸೂರಿನಲ್ಲಿ ಜನಸೇವಕ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆಗೆ ರಾಜ್ಯಾಧ್ಯಕ್ಷರಾದ ಕಟೀಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಇನ್ನು ಕಾರ್ಯಕರ್ತರೂ ಸಹ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಪ್ರಯತ್ನವನ್ನು ಹಾಕಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140ರಿಂದ 150 ಕ್ಷೇತ್ರಗಳಲ್ಲಿ ನಿಶ್ಚಿತವಾಗಿ ಗೆಲ್ಲಲಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಹಿಳೆಯರಿಗೆ ಮನೆಯಲ್ಲಿಯೇ ಕೆಲವೊಮ್ಮೆ ಗೌರವವನ್ನು ಕೊಡುತ್ತಿರಲಿಲ್ಲ. ಆದರೆ ಇಂದು ಸ್ತ್ರೀ ಯರು ಗ್ರಾ.ಪಂ ನಲ್ಲಿ ಗೆದ್ದು ಸ್ವಾಭಿಮಾನಿಗಳಾಗಿದ್ದಾರೆ. ಒಂದು ದಿನವೂ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ರಾಜ್ಯಾಧ್ಯಕ್ಷರಾಗಿರುವ ನಳಿನ ಕುಮಾರ ಕಟೀಲ್ ಅವರು ಅದ್ಬುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಬಗ್ಗೆ ಮಾತನಾಡುವುದೇ ನಮಗೆ ಶೋಭೆ ಅಲ್ಲ. ಕಾಂಗ್ರೆಸ್ ಎಲ್ಲಿದೆ? ಎಲ್ಲಿ ಅಧಿಕಾರದಲ್ಲಿದೆ. ಗೋಮಾಂಸವನ್ನು ತಿನ್ನುವ ಹೇಳಿಕೆ ನೀಡುವ, ಬೇಕೆಂದೇ ಪ್ರಚೋದನಕಾರಿಯಾಗಿ ಮಾತನಾಡುವವರ ಬಗ್ಗೆ ನಾವು ಪ್ರತಿಕ್ರಿಯೆಯನ್ನೇ ಕೊಡಬಾರದು ಎಂದು ಮುಖ್ಯಮಂತ್ರಿ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಮಾತನಾಡಿ, ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ, ಇಡೀ ಕರ್ನಾಟಕವನ್ನೇ ಕಲ್ಯಾಣಗೊಳಿಸಲು ಶ್ರಮವಹಿಸುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ನಮ್ಮವರು ಗೆದ್ದಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದರ್ಪ, ಅಹಂಕಾರವನ್ನು ತೋರಿಸಿದೆ. ಅದಕ್ಕಾಗಿ ಜನ ಬಿಜೆಪಿಯನ್ನು ಕೈಹಿಡಿದಿದ್ದಾರೆ. ಯಡಿಯೂರಪ್ಪ ಅವರು ಎಲ್ಲರಿಗೂ ಮಾದರಿ. ಅವರೇ ಎಲ್ಲ ಕಾರ್ಯಕರ್ತರಿಗೆ ಬಲ ಎಂದರು.
ಇಂದು 45 ಸಾವಿರ ಜನ ಪಂಚಾಯತ್ ಸದಸ್ಯರಾಗಿದ್ದಾರೆಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪರ ಕಾರ್ಯಕ್ರಮಗಳೇ ಕಾರಣ. ಪಕ್ಷದ ಕಾರ್ಯಕರ್ತರು ಹಾಗೂ ನೂತನ ಗ್ರಾಪಂ ಸದಸ್ಯರು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಗೆ ಮೂರು ಶಾಪಗಳು ತಟ್ಟಿದೆ. ಗಾಂದೀಜಿಯವರು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿ ಸ್ವಾತಂತ್ರ್ಯ ತಂದುಕೊಟ್ಟರೆ, ಅವರ ಫೋಟೋ ಹಿಡಿದು ಅಧಿಕಾರಕ್ಕೆ ಬಂದರೂ 70 ವರ್ಷಗಳಲ್ಲಿ ಅವರ ಚಿಂತನೆಯನ್ನು ಅಳವಡಿಸಿಲ್ಲ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕಾಯಿತು. ಇನ್ನು ಎರಡನೆಯದಾಗಿ ಶ್ರೇಷ್ಠ ಸಂವಿಧಾನವನ್ನು ನಿರ್ಮಾಣ ಮಾಡಿದ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಮತ ಕೇಳಿ ಗೆದ್ದರು. ಆದರೆ, ಅವರನ್ನೇ ಮರೆತರು, ಅವಮಾನ ಮಾಡಿದರು. ಇನ್ನು 3ನೇ ಶಾಪವೆಂದರೆ ಗೋಮಾಂಸವನ್ನು ತಿನ್ನುತ್ತೇವೆ ಎಂಬುದು. ಆದರೆ, ಯಡಿಯೂರಪ್ಪ ಅವರ ಸರ್ಕಾರ ಗೋವಧೆಯನ್ನು ನಿಷೇಧಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದೆ ಎಂದು ತಿಳಿಸಿದರು.
ಇದೇ ಗೆಲುವಿನೊಂದಿಗೆ ಮುಂದೂ ಸಹ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ವಿಜಯ ಯಾತ್ರೆ ಮುಂದುವರಿಯಬೇಕು. ಈ ಕಾರ್ಯಕ್ರಮಕ್ಕೆ ಸಹ ಮೈಸೂರಿನಿಂದಲೇ ಚಾಲನೆ ಕೊಡಲಾಗುವುದು ಎಂದು ಕಟೀಲ್ ಹೇಳಿದರು.