ಚೆನ್ನೈ, ಜ 11- ರಾಜಕೀಯ ಪ್ರವೇಶಿಸುವುದಿಲ್ಲವೆಂದು ಈಗಾಗಲೇ ತೀರ್ಮಾನಿಸಲಾಗಿದ್ದು, ಆ ವಿಷಯದ ಬಗ್ಗೆ ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ನಟ ರಜನಿಕಾಂತ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ 19 ಹಾಗೂ ತಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಘೋಷಿಸಿದ ನಂತರ ನಿರ್ಧಾರದ ಕುರಿತು ಮತ್ತೊಮ್ಮೆ ಪರಿಶೀಲಿಸುವಂತೆ ರಜನಿ ಮಕ್ಕಳ ಮಂದ್ರಮ್ –ಆರ್ ಎಮ್ಎಮ್ ನಿಂದ ಹೊರ ಹೋಗಿರುವ ಕಾರ್ಯಕರ್ತರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ರಜನಿ ಈ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯ ಪ್ರವೇಶಿಸದಿರಲು ಕಾರಣವೇನು ಎಂಬುದನ್ನು ಈಗಾಗಲೇ ತಿಳಿಸಲಾಗಿದೆ. ಆದರೂ ಕೆಲವು ಅಭಿಮಾನಿಗಳು ಪ್ರತಿಭಟಿಸುವ ಮೂಲಕ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೇಳುತ್ತಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ರಜನಿ ಟ್ವೀಟ್ ಮಾಡಿದ್ದಾರೆ.
ಜನಿ ಮಕ್ಕಳ ಮಂದ್ರಮ್ –ಆರ್ ಎಮ್ಎಮ್ ನಿಂದ ಉಚ್ಚಾಟಿತರಾಗಿರುವ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ಶಿಸ್ತು, ಸಂಯಮ ಪಾಲಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿರುವ ರಜನಿ, ಈಗಾಗಲೇ ನಿರ್ಧರಿಸಿರುವ ಈ ವಿಷಯದ ಬಗ್ಗೆ ಮರುಪರಿಶೀಲಿಸುವಂತೆ ಮತ್ತೊಮ್ಮೆ ಪ್ರತಿಭಟನೆ ನಡೆಯದಿರಲಿ ಎಂದಿದ್ದಾರೆ.