ಬೆಳಗಾವಿ, 12- ದಿನದಿನಕ್ಕೂ ಮಾಲಿನ್ಯ ಪ್ರಮಾಣ ಏರುತ್ತಿದೆ. ಇಂಧನದ ಸ್ವಾಭಾವಿಕ ಮೂಲಗಳೇ ಕಡಿಮೆ ಆಗುತ್ತಿದ್ದು ಹಸಿರು ಹಾಗೂ ಸ್ಥಿರವಾದ ಇಂಧನ ಮೂಲಗಳು ಈ ಕ್ಷಣದ ಅಗತ್ಯವಾಗಿದೆ. ಮನೆಗಳಿಗೆ ಕೂಡ ಸೌರಶಕ್ತಿ ಬಳಕೆ ಮಾಡುವುದು ಅವಶ್ಯವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಪ್ರದೀಪ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಮಹಿಳಾ ಕಲ್ಯಾಣ ಸಂಸ್ಥೆ ಜಂಟಿಯಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಹಾಗೂ ಹುಕ್ಕೇರಿ ತಾಲೂಕಿನ ಯಲ್ಲಾಪೂರ ಗ್ರಾಮದ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಆವರಣದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನಗಳ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ದಿನದಿನಕ್ಕೂ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ, ಸ್ವಾಭಾವಿಕ ಶಕ್ತಿ ಮೂಲಗಳಿಂದ ಈ ಬೇಡಿಕೆಯನ್ನು ಪೂರೈಸುವುದು ಕಷ್ಟ. ಹೀಗೆ ಮುಂದುವರಿದರೆ ವಿದ್ಯುತ್ ಕೊರತೆ ಎದುರಾಗುತ್ತದೆ. ಆದ್ದರಿಂದಲೇ ಸೌರಶಕ್ತಿ ಎಂಬುದು ನಮ್ಮ ದೇಶಕ್ಕೆ ಬಹಳ ಮುಖ್ಯವಾಗಿದೆ. ಅಲ್ಲದೆ ಸೌರಶಕ್ತಿ ಬಳಸಿಕೊಂಡು ಅಡುಗೆ ಮಾಡುವುದು, ನೀರು ಕಾಯಿಸುವುದು, ಬೀದಿ ದೀಪಗಳ ಅಳವಡಿಕೆ ಮುಂತಾದವುದರ ಬಗ್ಗೆ ಮಾಹಿತಿ ನೀಡಿದರು.
ಹುಕ್ಕೇರಿ ಸಿ.ಡಿ.ಪಿ.ಒ ಮಂಜುನಾಥ ಪರಸನ್ನವರ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸೌರಶಕ್ತಿ ಬಳಕೆಗೆ ಭಾರತದಲ್ಲಿ ಅಗಾಧವಾದ ಅವಕಾಶಗಳಿವೆ. ದೇಶದ ಬಹುತೇಕ ಭಾಗದಲ್ಲಿ ವರ್ಷದ ಬಹು ಸಮಯ ಸೂರ್ಯನ ಪ್ರಖರತೆ ಹೆಚ್ಚು, ಇಂಥ ಸೌರಶಕ್ತಿಯನ್ನು ಬಳಸುವುದರಿಂದ ಯಾವುದೇ ಕಾರ್ಬನ್ ಪ್ರಮಾಣ ವಾತಾವರಣಕ್ಕೆ ಬಿಡುಗಡೆಯಾಗುವುದಿಲ್ಲ. ಆದ್ದರಿಂದಲೇ ಸೌರಶಕ್ತಿಯು ಭಾರತದಲ್ಲಿ ಪ್ರಮುಖ ನವೀಕೃತ ಇಂಧನ ಮೂಲವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಳಗಾವಿಯ ಡಾ:ಸ.ಜ.ನಾ ವಿಜ್ಞಾನ ಕೇಂದ್ರದ ಯೋಜನಾ ಸಂಯೋಜಕರಾದ ರಾಜಶೇಖರ ಪಾಟೀಲ, ಮಾತನಾಡಿ ಪ್ರತಿಯೊಬ್ಬರು ಒಂದು ಜೈವಿಕ ಇಂಧನ ಸಸಿ ನೆಡಬೇಕು. ಮನೆ ಪಕ್ಕ ಒಂದು ಹೊಂಗೆ ಗಿಡ ನೆಟ್ಟು ಪರಿಸರ ರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕವಿತಾ ಅಕ್ಕಿ ಅವರು ಗಟ್ಟಿ ಕಸಗಳ ನಿರ್ವಹಣೆ, ಎರೆಗೊಬ್ಬರ ತಯಾರಿಕೆ, ಮಾನವನ ಆರೋಗ್ಯಕ್ಕಿರುವ ಸಂಬಂಧ ಶುಚಿತ್ವಗಳ ವಿಷಯಗಳ ಕುರಿತು ವಿವರಿಸಿದರು. ಪ್ರಕಾಶ ಹೊಸಮನಿ ಮಾತನಾಡಿ, ನೀರು ಜೀವನ ಸಂಜೀವಿನಿ, ನೀರಿಲ್ಲದೇ ಮಾನವನ ಬದುಕು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅಸಮರ್ಪಕ ಬಳಕೆಯಿಂದ ನೀರಿನ ಕೊರತೆಯಾಗುತ್ತಿದೆ. ಆದಕಾರಣ ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಂಡಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲವೆಂದರು.
ಕರ್ನಾಟಕ ಪಬ್ಲಿಕ ಶಾಲೆ, ಯರಗಟ್ಟಿಯ ಪ್ರಾಚಾರ್ಯರಾದ ಕಿರಣ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.