ಬೆಳಗಾವಿ, ಜ.12 : ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಂಗೊಳ್ಳಿ ಉತ್ಸವವನ್ನು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸರಳ ರೀತಿಯಲ್ಲಿ ಆಚರಿಸಲಾಯಿತು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ಮಂಗಳವಾರ ಸಂಗೊಳ್ಳಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿದರು.
ರಾಯಣ್ಣನ ದೇವಸ್ಥಾನದಲ್ಲಿ ಇರುವ ಮೂರ್ತಿಗೆ ಸಂಪ್ರದಾಯದಂತೆ ಪ್ರಾತಃಕಾಲ ಪೂಜೆ ನೆರವೇರಿಸಲಾಯಿತು.
ರಾಯಣ್ಣನ ಸಮಾಧಿಯ ಪುಣ್ಣಭೂಮಿ ಖಾನಾಪುರ ತಾಲ್ಲೂಕಿನ ನಂದಗಡದಿಂದ ಆಗಮಿಸಿದ ವೀರಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು.
ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಹಶಿಲ್ದಾರ ದೊಡ್ಡಪ್ಪ ಹೂಗಾರ ಹಾಗೂ ಗ್ರಾಮದ ಹಿರಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸಂಗೊಳ್ಳಿ ಉತ್ಸವದ ಅಂಗವಾಗಿ ವಿವಿಧ ಕಲಾತಂಡಗಳು ಗ್ರಾಮದಲ್ಲಿ ಸಂಚರಿಸಿದವು.