ಬೆಂಗಳೂರು, ಜ 12- ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸರದಿ ಮೀಸಲಾತಿ ನಿಗದಿಪಡಿಸುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಈವರೆಗೆ ನಡೆಸುತ್ತಿದ್ದ ಮ್ಯಾನ್ಯುಯಲ್ ಅಂದರೆ ಮಾನವ ಹಸ್ತಕ್ಷೇಪ ಮಾಡುವುದನ್ನು ಕೈಬಿಡುವಂತೆ ಆಯೋಗ ಸೂಚಿಸಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಸರದಿ ಮೀಸಲಾತಿ ನಿಗದಿಪಡಿಸುವಂತೆ ಆದೇಶಿಸಿದೆ.
ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿಪಡಿಸಲು ಕೊಪ್ಪಳ ಜಿಲ್ಲೆಯಲ್ಲಿ ಡಿಐಓ – ಎನ್.ಐ.ಸಿ ಯಿಂದ ಜಿಪಿಪಿವಿಪಿ – ಅಪ್ಲಿಕೇಷನ್ /ತಂತ್ರಾಂಶ ಅಥವಾ ಎಕ್ಸೆಲ್ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷರ ಹುದ್ದೆಯ ಮೀಸಲಾತಿ ನಿಗದಿಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ 1993 ರ ಪ್ರಕರಣ 44[2] ರ ಪ್ರಕಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು, ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಹಾಗೂ ವಿಶೇಷ ಆದೇಶಕ್ಕೆ ಒಳಪಟ್ಟು ಪ್ರತಿ ತಾಲ್ಲೂಕಿನ ಗ್ರಾಮ ಪಂಚಾಯತ್ ಗಳಿಗೆ ವರ್ಗಾವಾರು ಅಧ್ಯಕ್ಷ – ಉಪಾಧ್ಯಕ್ಷರ ಹುದ್ದೆ ಮೀಸಲಿಸಿರಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಇದೀಗ ಸರದಿ ಮೀಸಲಾತಿಯಂತೆ 1993 ನೇ ಸಾಲಿನ ಚುನಾವಣೆ ನಡೆದ ನಂತರದಿಂದ 2015 ನೇ ಸಾಲಿನವರೆಗೆ ಇದು 9ನೇ ಸರದಿ ಮೀಸಲಾತಿಯಾಗಿದೆ. ಹೀಗಾಗಿ ಯಾವುದೇ ಗೊಂದಲವಿಲ್ಲದೇ ಪಾರದರ್ಶಕವಾಗಿ ನಿಗದಿಪಡಿಸುವಂತೆ ಆದೇಶಿಸಲಾಗಿದೆ.