ಪುದುಚೇರಿ, ಜ 13 – ತಮ್ಮ ಬೇಡಿಕೆಗಳಿಗೆ ಒತ್ತು ನೀಡುವಂತೆ ಆಗ್ರಹಿಸಿ ಕಲ್ಯಾಣ ಸಚಿವ ಎಂ.ಕಂದಸಾಮಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ನಾಲ್ಕನೇ ದಿನಕ್ಕೆ ಪ್ರವೇಶಿಸಿದೆ.
ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ 15 ಫೈಲ್ಗಳನ್ನು ಮಂಜೂರು ಮಾಡುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿ ಕಂದಸಾಮಿ ಭಾನುವಾರ ರಾತ್ರಿ ಧರಣಿಯನ್ನು ಪ್ರಾರಂಭಿಸಿದ್ದ ಸಚಿವರು ಮಂಗಳವಾರ ರಾತ್ರಿ ವಿಧಾನಸಭೆಯ ಪೋರ್ಟಿಕೊದಲ್ಲಿ ಮಲಗಿದ್ದರು.
ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಮಂಗಳವಾರ ಉನ್ನತ ಅಧಿಕಾರಿಗಳಿಂದ ಸಚಿವರ ಬೇಡಿಕೆಗಳ ಬಗ್ಗೆ ವಿವರ ನೀಡುವಂತೆ ತಿಳಿಸಿದ್ದು, ಅದನ್ನು ಸ್ವೀಕರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಹಾಗೂ ಧರಣಿ ಹಿಂಪಡೆಯುವಂತೆ ಕಂದಸಾಮಿಯವರಲ್ಲಿ ಮನವಿ ಮಾಡಿದ್ದಾರೆ.
ಆದರೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಸ್ಥಳದಿಂದ ಜರುಗುವುದಿಲ್ಲ. ಪೊಂಗಲ್ ಹಬ್ಬವನ್ನೂ ಆಚರಿಸುವುದಿಲ್ಲ ಎಂದು ಕಂದಸಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸಲು ಲೆಫ್ಟಿನೆಂಟ್ ಗವರ್ನರ್ಗೆ ಸಲಹೆ ನೀಡುವಂತೆ ಅವರು ರಾಷ್ಟ್ರಪತಿ, ಪ್ರಧಾನಿ, ಗೃಹ ಸಚಿವರು ಮತ್ತು ಎಸ್ಸಿ ಎಸ್ಟಿ ರಾಷ್ಟ್ರೀಯ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಮಧ್ಯೆ, ಕಂದಸಾಮಿಯವರನ್ನು ಬೆಂಬಲಿಸಿ ಬುಧವಾರ ಸಂಜೆ ರಸ್ತೆ ದಿಗ್ಬಂಧನ ನಡೆಸಿದ 60 ಎಐಟಿಯುಸಿ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.