ನವದೆಹಲಿ, ಜ 13 – ಅಡುಗೆ ಅನಿಲ ಬಳಕೆ ಮಾಡುವ ಗೃಹಿಣಿಯರಿಗೆ ಹೊಸ, ಸಂತಸದ ಸುದ್ದಿ. ಇನ್ನು ಮುಂದೆ ಗ್ಯಾಸ್ ಬುಕ್ ಮಾಡಿದ ಕೇವಲ 30 ರಿಂದ 45 ನಿಮಿಷದಲ್ಲೇ ಮನೆಯ ಬಾಗಿಲಿಗೆ ತ್ವರಿತ ಸಿಲಿಂಡರ್ ಪೂರೈಕೆಯಾಗಲಿದೆ.
ಇಂತಹ ಹೊಸ ವ್ಯವಸ್ಥೆ ಮುಂದಿನ ತಿಂಗಳ ಒಂದರಿಂದ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಎಲ್ಪಿಜಿ ಗ್ಯಾಸ್ ವಿತರಣೆಯನ್ನು ಬುಕ್ ಮಾಡಿದ ಕೂಡಲೇ ನೀಡುವ ಬಗ್ಗೆ ಪ್ರಯೋಗಿಕವಾಗಿ ಜಾರಿಗೆ ತರಲು ಐಒಸಿ ಮುಂದಾಗಿದೆ.
ಈ ಯೋಜನೆಯಡಿಯಲ್ಲಿ ಗ್ರಾಹಕರು ಬುಕಿಂಗ್ ಮಾಡಿದ 30 ರಿಂದ 45 ನಿಮಿಷಗಳಲ್ಲಿ ಎಲ್ಪಿಜಿ ಸಿಲಿಂಡರ್ ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ. ಈ ದಿಕ್ಕಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಐಒಸಿ ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 1ರಿಂದ ಈ ಹೊಸ ಸೇವೆ ಆರಂಭವಾಗಲಿದೆ ಇಂಡಿಯನ್ ಆಯಿಲ್ ತನ್ನ ಗ್ರಾಹಕರಿಗೆ ಇಂಡೇನ್ ಬ್ರಾಂಡ್ ಹೆಸರಿನಲ್ಲಿ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿದೆ. ದೇಶದಲ್ಲಿ 28 ಕೋಟಿ ಎಲ್ ಪಿಜಿ ಗ್ರಾಹಕರಿದ್ದು, 14 ಕೋಟಿ ಐಒಸಿ ಗ್ರಾಹಕರನ್ನು ಹೊಂದಿದೆ.
ಐಒಸಿ ಅಧಿಕಾರಿ ಪ್ರಕಾರ, ಈ ತಾತ್ಕಲ್ ಎಲ್ ಪಿಜಿ ಸೇವೆ ಅಥವಾ ಸಿಂಗಲ್ ಡೇ ಡೆಲಿವರಿ ಸೇವೆಯನ್ನು ಬಳಸುವ ಯಾವುದೇ ಗ್ರಾಹಕ ಅದಕ್ಕೆ ಸಣ್ಣ ಮೊತ್ತದ ಬೆಲೆ ತೆರಬೇಕಾಗುತ್ತದೆ, ಪ್ರೀಮಿಯಂ ಅಥವಾ ಶುಲ್ಕ ಎಷ್ಟು ಎಂಬುದು ಇನ್ನೂ ಚರ್ಚೆಹಂತದಲ್ಲಿದೆ. ಈ ತಕ್ಷಣದ ಸೇವೆಗೆ ಡೀಲರ್ ಗಳ ಪ್ರಸ್ತುತ ವಿತರಣಾ ಜಾಲವನ್ನು ಬಳಸಲಾಗುತ್ತದೆ ಎನ್ನಲಾಗಿದೆ.