ದಾವಣಗೆರೆ, ಜ.14 – ಸಚಿವ ಸ್ಥಾನ ಸಿಗದವರು ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ, ಇಂತಹವರು ಕೇಂದ್ರದ ನಾಯಕರೊಂದಿಗೆ ದೂರು ನೀಡಬಹುದು. ಅವರನ್ನು ಯಾರು ಕೂಡ ತಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಇಟ್ಟು ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಸಚಿವ ಸ್ಥಾನ ಸಿಗದ 10-12 ಶಾಸಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ತಮ್ಮ ಇತಿ ಮಿತಿಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ. ಆರೋಪ ಮಾಡುವವರು ಕೇಂದ್ರದ ನಾಯಕರೊಂದಿಗೆ ತಿಳಿಸಬಹುದು. ಅವರಿಗೆ ಯಾರು ಕೂಡ ಅಡ್ಡಿ ಮಾಡುವುದಿಲ್ಲ ಎಂದರು.
ಸುಳ್ಳು ಆರೋಪಗಳನ್ನು ಹೇಳಿ ಗೊಂದಲ ಸೃಷ್ಟಿಸಬಾರದು, ಈ ಮೂಲಕ ಪಕ್ಷದ ಶಿಸ್ತಿಗೆ ಧಕ್ಕೆ ತರಬಾರದು. ಕೇಂದ್ರದ ಆಶೀರ್ವಾದ ಇರುವುದರಿಂದ ಮುಂದಿನ ಎರಡೂವರೆ ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜನವರಿ ತಿಂಗಳಾಂತ್ಯಕ್ಕೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಮಾರ್ಚನಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಉತ್ತಮವಾದ, ರೈತ ಪರವಾದ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.