ಬೆಂಗಳೂರು, ಜ 14- ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಸಿದ್ಧವಾಗಲಿರುವ ಸಲಾರ್ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಫಸ್ಟ್ ಲುಕ್ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದೆ. ಇದೀಗ ಚಿತ್ರತಂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಮುಹೂರ್ತವನ್ನೂ ನೆರವೇರಿಸಿಕೊಳ್ಳಲಿದ್ದು, ಜ. 15ರ ಶುಭ ಶುಕ್ರವಾರದಂದು ಚಿತ್ರದ ಮುಹೂರ್ತ ನೆರವೇರಲಿದೆ.
ಪ್ರಶಾಂತ ನೀಲ ನಿರ್ದೇಶನದ ಸಲಾರ್ ಚಿತ್ರದ ಮುಹೂರ್ತ ಶುಕ್ರವಾರ ಹೈದರಾಬಾದ್ ನಲ್ಲಿ 11 ಗಂಟೆಗೆ ನೆರವೇರಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಭಾಗವಹಿಸಲಿದೆ.
ಮುಖ್ಯ ಅತಿಥಿಯಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಉಪಮುಖ್ಯಮಂತ್ರಿಗಳೂ ಆಗಿರುವ ಡಾ. ಅಶ್ವತ್ಥನಾರಾಯಣ ಸಿ.ಎನ್ ಭಾಗವಹಿಸಲಿದ್ದಾರೆ. ನಟ ಯಶ್ ಈ ಮುಹೂರ್ತ ಕಾರ್ಯಕ್ರಮದಲ್ಲಿ ಇರಲಿದ್ದು, ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಸಹ ಭಾಗವಹಿಸಲಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಸಲಾರ್ ಚಿತ್ರ ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿದೆ. ತಮ್ಮ ಲುಕ್ ಬಗ್ಗೆ ಮಾತನಾಡಲಿರುವ ಪ್ರಭಾಸ್, ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
ಶುಕ್ರವಾರ ಮುಹೂರ್ತ ಮುಗಿಸಿಕೊಂಡ ಸಿನಿಮಾ ಇದೇ ತಿಂಗಳ ಮಾಸಾಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ. ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ಸಹ ಶುರುವಾಗಿದೆ. ಇನ್ನುಳಿದ ಪಾತ್ರವರ್ಗದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆ.