ಬೆಂಗಳೂರು, ಜ 14- ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸುತ್ತಿದ್ದು, ಭಾರ್ಗವ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.
ಸಂಕ್ರಾತಿಯಂದು ವಿಶೇಷ ಪೋಸ್ಟರ ಬಿಡುಗಡೆಗೊಳಿಸುವ ಮೂಲಕ ಆರ್ ಚಂದ್ರು ಈ ಸುದ್ದಿ ತಿಳಿಸಿದ್ದು, ಭಾರ್ಗವ ಭಕ್ಷಿ ಪಾತ್ರದಲ್ಲಿ ಸುದೀಪ ರಗಡ್ ಲುಕ್ ನಲ್ಲಿ ಕಾಣಿಸಿದ್ದಾರೆ.
ಸುದೀಪ ಮತ್ತು ಉಪೇಂದ್ರ ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ನಂದಕಿಶೋರ ನಿರ್ದೇಶನದಲ್ಲಿ ಬಂದಿದ್ದ ಈ ಸಿನಿಮಾದಲ್ಲಿ ಸುದೀಪ ಕೃಷ್ಣನ ಪಾತ್ರ ನಿರ್ವಹಿಸಿದ್ದರೆ, ದೇವರು ಇಲ್ಲ ಎಂಬ ವಾದವನ್ನು ಮಂಡಿಸುವ ಸಾಮಾನ್ಯ ವ್ಯಕ್ತ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು.
: ಉಪೇಂದ್ರ ಸ್ವಾಗತ:
ಬಹುನಿರೀಕ್ಷಿತ “ಕಬ್ಜ” ಚಿತ್ರತಂಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಸೇರ್ಪಡೆಯನ್ನು ಉಪೇಂದ್ರ ಸ್ವಾಗತಿಸಿದ್ದು, “ಕಿಚ್ಚ ಸುದೀಪ” ಅವರಿಗೆ ಆತ್ಮೀಯ ಸುಸ್ವಾಗತ. ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಟ್ವೀಟ ಮಾಡಿದ್ದಾರೆ. ಕಿಚ್ಚ ಸುದೀಪ ಕೂಡ “ಕಬ್ಬ” ಕುಟುಂಬದಲ್ಲಿ ಸೇರ್ಪಡೆಯಾಗಿದ್ದಕ್ಕೆ ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಎಂ.ಟಿ.ಬಿ ನಾಗರಾಜ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ ಕಾರ್ಯನಿರ್ವಹಿಸುತ್ತಿದ್ದಾರೆ.
ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ ಸಂಕಲನ, ರಾಜು ಸುಂದರಂ, ಗಣೇಶ, ಶೇಖರ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ,ವಿಜಯ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ, ನವೀನ, ಕೋಟ ಶ್ರೀನಿವಾಸ್, ಜಯಪ್ರಕಾಶ, ಕಾಟ್ ರಾಜು, ಸುಬ್ಬರಾಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.