ಮುಂಬೈ, ಜ 14- ಹದಿನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ತಮ್ಮ ವಿರುದ್ದ ಮಾಡಿರುವ ಆರೋಪವನ್ನು ಮಹಾರಾಷ್ಟ್ರ ಸಚಿವ ಧನುಂಜಯ ಮುಂಡೆ ಖಂಡಿಸಿದ್ದಾರೆ. ಸದರಿ ಮಹಿಳೆಯೊಂದಿಗೆ ತಾವು 2003 ರಿಂದ ಸಂಬಂಧ ಇರಿಸಿಕೊಂಡಿರುವುದಾಗಿ ಎನ್ ಸಿ ಪಿ ಮುಖಂಡ, ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಸಚಿವ ಧನಂಜಯ ಮುಂಡೆ ಬುಧವಾರ ಹೇಳಿದ್ದಾರೆ.
ಮತ್ತೊಂದು ಕಡೆ ಈ ವಿವಾದದ ಬಗ್ಗೆ ಬಿಜೆಪಿ ನಾಯಕ ನೀಡಿರುವ ಹೇಳಿಕೆಗಳು ತೀವ್ರ ಕುತೂಹಲ ಕೆರಳಿಸಿವೆ. ಸದರಿ ಮಹಿಳೆ ತಮಗೆ 2010 ರಿಂದಲೂ ಕಿರುಕುಳ ನೀಡುತ್ತಿದ್ದಾಳೆ ಎಂದು ಮಹಾರಾಷ್ಟ್ರ ಬಿಜೆಪಿ ಶಾಸಕ ಕೃಷ್ಣಾ ಹೆಗ್ಡೆ ಬಹಿರಂಗಪಡಿಸಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಕೃಷ್ಣಾ ಹೆಗ್ಡೆ ಗುರುವಾರ ಮಹಾರಾಷ್ಟ್ರ ಪೊಲೀಸರಿಗೆ ಪತ್ರ ಬರೆದಿದ್ದಾರೆ. 2010 ರಿಂದಲೂ ಆ ಮಹಿಳೆ ತಮಗೆ ಫೋನ್, ಮೇಸೇಜ್ ಮಾಡುತ್ತಿದ್ದಾಳೆ. ತನ್ನೊಂದಿಗೆ ಸಂಬಂಧ ಇರಿಸಿಕೊಳ್ಳಲು ಆಕೆ ಒತ್ತಡ ಹೇರುತ್ತಿದ್ದಳು ಎಂದು ಹೆಗ್ಡೆ ಪೊಲೀಸರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
2015 ರಿಂದ ಆಕೆ ಕಿರುಕುಳ ನೀಡುವುದನ್ನು ಆರಂಭಿಸಿದ್ದಾಳೆ. ತನ್ನನ್ನು ಭೇಟಿಯಾಗುವಂತೆ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾಳೆ. ಆದರೆ ಆಕೆಯೊಂದಿಗೆ ಯಾವುದೇ ಸಂಬಂಧ ಹೊಂದಲು ತಮಗೆ ಆಸಕ್ತಿ ಇಲ್ಲ ಎಂಬುದನ್ನು ಹೇಳಿದ್ದೇನೆ ಎಂದು ಹೆಗ್ಡೆ ಬರೆದುಕೊಂಡಿದ್ದಾರೆ.
ಆಕೆ ಹನಿಟ್ರಾಪ್ ಮಾಡುತ್ತಾಳೆ ಎಂಬುದನ್ನು ಬಲ್ಲ ಮೂಲಗಳಿಂದ ತಿಳಿದುಕೊಂಡಿದ್ದೇನೆ. ಹಾಗಾಗಿ ನಾನು ಆಕೆಯನ್ನು ಭೇಟಿಯಾಗಲು ನಿರಾಕರಿಸಿದ್ದೆ. ಆಕೆಯ ವಿರುದ್ದ ತಕ್ಷಣವೇ ತನಿಖೆ ಮಾಡಿ. ಇಂದು ಅವರನ್ನು( ಧನಂಜಯ ) ಆಕೆ ಗುರಿಯಾಗಿಸಿಕೊಂಡಿದ್ದಾರೆ. ಹಿಂದೆ ನನಗೂ ಇದೇ ರೀತಿ ಮಾಡಿದ್ದರು. ನಾಳೆ ಬೇರೆಯವರಿಗೆ ಈ ರೀತಿ ಆಗಬಹುದು ”ಎಂದು ಹೆಗ್ಡೆ ಪೊಲೀಸರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹೆಗ್ಡೆ ಬರೆದ ಪತ್ರದ ಬಗ್ಗೆ ಸದರಿ ಮಹಿಳಾ ವಕೀಲರು ಪ್ರತಿಕ್ರಿಯಿಸಿ “ನಾನು ಮೊದಲು ದೂರನ್ನು ಸಂಪೂರ್ಣವಾಗಿ ಓದಿ, ಕಕ್ಷೀದಾರರೊಂದಿಗೆ ಮಾತನಾಡಿ, ನಂತರ ಪ್ರತಿಕ್ರಿಯಿಸುತ್ತೇನೆ, ”ಎಂದು ಹೇಳಿದ್ದಾರೆ.