ಜಮ್ಮು, ಜ 15- ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪಡೆಗಳು 2020 ರಲ್ಲಿ ಗಡಿಯುದ್ದಕ್ಕೂ 5 ಸಾವಿರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿವೆ ಎಂದು ಸೇನಾದಿನದಂದು ಭಾರತೀಯ ಸೇನೆ ತಿಳಿಸಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಪಾಕಿಸ್ತಾನವು ಕದನ ವಿರಾಮವನ್ನು ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ 5,246 ಬಾರಿ ಉಲ್ಲಂಘಿಸಿದ್ದು, 2019 ಕ್ಕೆ ಹೋಲಿಸಿದರೆ ಕದನ ವಿರಾಮ ಉಲ್ಲಂಘನೆಯ ಅಂಕಿ ಅಂಶವು 3,824 ಪಟ್ಟು ಹೆಚ್ಚಾಗಿದೆ. “ಕದನ ವಿರಾಮ ಉಲ್ಲಂಘನೆಯು 2019 ಕ್ಕೆ ಹೋಲಿಸಿದರೆ 2020ರಲ್ಲಿ ಹೆಚ್ಚು” ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನವು ಹತಾಶೆಯಿಂದ ಗಡಿಯಲ್ಲಿ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿಯನ್ನು ಪ್ರಾರಂಭಿಸುತ್ತಿದೆ, ವಿಶೇಷವಾಗಿ ಭಾರತ ಸರ್ಕಾರವು 2019 ರಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಿರಿಕಿರಿ ಹೆಚ್ಚಿದೆ.
ಈ ಮಧ್ಯೆ, ಭಾರತೀಯ ಸೇನೆಯು 2019 ರಲ್ಲಿ 152 ಭಯೋತ್ಪಾದಕರನ್ನು ಹೊಡೆದುರುಳಿಸಿದರೆ, 2020 ರಲ್ಲಿ 221 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ. 2020 ರಲ್ಲಿ ಭದ್ರತಾ ಪಡೆಗಳು 47 ಭಯೋತ್ಪಾದಕರನ್ನು ಬಂಧಿಸಿದ್ದು, 2019 ರಲ್ಲಿ 43 ರಷ್ಟಿತ್ತು. ಇದಲ್ಲದೆ, 2019 ರಲ್ಲಿ 3 ಹಾಗೂ 2020 ರಲ್ಲಿ 11 ಭಯೋತ್ಪಾದಕರು ಶರಣಾಗಿದ್ದಾರೆ. 2020 ಮತ್ತು 2019 ರಲ್ಲಿ ಸೇನೆಯು ಒಟ್ಟು ಹತ್ತು ಬಾರಿ ಒಳನುಸುಳುವಿಕೆಯನ್ನು ವಿಫಲಗೊಳಿಸಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.