This is the title of the web page

ಎಸೆದು ಹೋದ 1 ದಿನದ ಶಿಶುವನ್ನು ರಕ್ಷಿಸಿದ ನಾಯಿ

ಮುಂಗೇಲಿ (ಛತ್ತೀಸ‌ಗಢ): ಕೊರೆಯುವ ಚಳಿಯಲ್ಲಿ ತಾಯಿಯೊಬ್ಬಳು ಒಂದು ದಿನದ ಹಿಂದೆ ಹೆತ್ತಿದ್ದ ತನ್ನ ಹೆಣ್ಣು ಶಿಶುವನ್ನು ಬೀದಿಯಲ್ಲಿ ಬಿಟ್ಟು ಹೋದಾಗ ಆ ಮಗುವನ್ನು ಬೀದಿ ನಾಯಿಯೊಂದು ರಾತ್ರಿಯಿಡಿ ರಕ್ಷಣೆ ಮಾಡಿದ ಘಟನೆ ಛತ್ತೀಸ​​ಗಡದ ಮುಂಗೇಲಿ ಜಿಲ್ಲೆಯ ಸರಿಸ್ಟಾಲ್​ ಗ್ರಾಮದಲ್ಲಿ ನಡೆದಿದೆ.

ಹೆಣ್ಣು ಕುಲದ ಕರುಣಾಸ್ವಭಾವಕ್ಕೆ ವಿರುದ್ಧವಾಗಿರುವ ಅಪರಿಚಿತ ಮಹಿಳೆಯೊಬ್ಬಳು ತನ್ನ ಒಂದು ದಿನದ ಶಿಶುವನ್ನು ನಾಯಿ ಮರಿಗಳ ಮಧ್ಯೆ ಇಟ್ಟು ಹೋಗಿದ್ದು, ಆ ನಾಯಿ ಮರಿಗಳ ತಾಯಿ ನಿನ್ನೆ ರಾತ್ರಿಯಿಡಿ ಮಾನವ ಶಿಶುವನ್ನು ತನ್ನ ನಾಲ್ಕು ಮರಿಗಳ ಜೊತೆಗೆ ಎಚ್ಚರಿಕೆಯಿಂದ ಕಾಪಾಡಿದೆ. ಬೆಳಿಗ್ಗೆ ಈ ನವಜಾತ ಶಿಶುವನ್ನು ಕಂಡ ಜನರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಸರಿಸ್ಟಾಲ್​ ಗ್ರಾಮಸ್ಥರು ಕೂಡಲೇ ಲೋರ್ಮಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಎಸ್‌ಐ ಚಿಂತಾರಾಮ ತಂಡ ಮಗುವನ್ನು ರಕ್ಷಿಸಿ, ಪರೀಕ್ಷೆ ನಡೆಸಿ ಮುಂಗೇಲಿಗೆ ಕರೆದೊಯ್ದು ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿ ನಡೆಸುತ್ತಿರುವ ಚೈಲ್ಡ್ ಲೈನ್ ಯೋಜನೆಯು ಬಾಲಕಿಗೆ “ಆಕಾಂಕ್ಷಾ” ಎಂದು ಹೆಸರಿಟ್ಟಿದ್ದು ಮಗು ಎಲ್ಲಿ ವಾಸಿಸಬೇಕೆಂದು ಸಮಿತಿ ನಿರ್ಧರಿಸಲಿದೆ.

ತೀವ್ರ ಚಳಿಯ ನಡುವೆಯೂ ಕರುಳ ಬಳ್ಳಿಯನ್ನು ತೊರೆದು ಹೋದ ತಾಯಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ನಾವು ಕೆಲಸದ ನಿಮಿತ್ತ ಹೊರಗೆ ಬಂದಿದ್ದೆವು. ಬೆಳಗ್ಗೆ 11 ಗಂಟೆಗೆ ಗ್ರಾಮದಲ್ಲಿ ನಾಯಿಗಳ ಮಧ್ಯೆ ನವಜಾತ ಹೆಣ್ಣು ಮಗು ಇದ್ದದ್ದನ್ನು ಕಂಡು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದೆವು. ಬಳಿಕ ನವಜಾತ ಶಿಶುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು ಎಂದು ಸ್ಥಳೀಯ ಸರಪಂಚ‌ ಮುನ್ನಾಲಾಲ‌ ಪಟೇಲ‌ ಹೇಳಿದ್ದಾರೆ.

You might also like
Leave a comment