This is the title of the web page

ಪಠ್ಯದ ಸುಳಿ

ಪಠ್ಯ ಪರಿಷ್ಕರಣೆ ಮುಗಿದಿದೆ. ಪುಸ್ತಕ ಮುದ್ರಣ ಕೂಡ ಆಗಿದೆ. ಅದಕ್ಕೆ ಈಗ ತಕರಾರು. ಪಠ್ಯದಲ್ಲಿ ಬಳಸಲಾದ ಕವನ, ಪ್ರಬಂಧ, ಕತೆಗಳನ್ನು ಬಳಸಬಾರದು ಎಂದು ಆಯಾ ಲೇಖಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಪರಿಷ್ಕರಣ ಸಮಿತಿ ಅಧ್ಯಕ್ಷರ ವಿರುದ್ಧ ಕ್ರಮ ಜರುಗಿಸುವಂತೆ ಮಠದ ಮುಖಂಡರೊಬ್ಬರು ಒತ್ತಾಯಿಸಿದ್ದಾರೆ. ಇದು ಸಾಲದು ಎಂಬಂತೆ ಇನ್ನೂ ಹಲವು ಧಾರ್ಮಿಕ ಮುಖಂಡರು, ಬಸವಣ್ಣನವರ ಪಠ್ಯದಲ್ಲಿ ಅವರ ಬಗ್ಗೆ ಸರಿಯಾಗಿ ಬಿಂಬಿತವಾಗಿಲ್ಲ, ಕ್ರಾಂತಿಕಾರಕ ಸಾಮಾಜಿಕ ಬದಲಾವಣೆ ತಂದ ಮಹಾನ್ ನಾಯಕನಿಗೆ ಅವಮಾನ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಪುಸ್ತಕ ಮುದ್ರಿತವಾಗಿ ಮಕ್ಕಳ ಕೈ ಸೇರಿದರೂ ಅದರಲ್ಲಿನ ಬಹುಪಾಲು ವಿಷಯ ಬಳಕೆಗೆ ಬರುವಂತಿಲ್ಲ. ಇದರಿಂದ ಸರ್ಕಾರ ನೂರಾರು ಕೋಟಿ ಅನಗತ್ಯ ವೆಚ್ಚ ಮಾಡಿದಂತೆ ಆಗುತ್ತದೆ.

ಈ ಬಾರಿ ಶಾಲೆಗಳು ಹೊಸ ಹುರುಪಿನಿಂದ ಆರಂಭ ಆಗಿವೆ. ಎರಡು ವರ್ಷದ ಕೋವಿಡ್ ಪಿಡುಗಿನಿಂದ ಶಾಲೆಯ ಮುಖ ಕಾಣದ ಮಕ್ಕಳು ಮರಳಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಅವರ ಕೈಗೆ ಹೊಸ ಪುಸ್ತಕ ಇಡುವ ಬದಲು ವಿವಾದ ಕೈಗಿಡುತ್ತಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ ಆಗಿದೆ ಮಕ್ಕಳ ಸ್ಥಿತಿ. ವಾಸ್ತವದಲ್ಲಿ ನಮ್ಮ ಪಠ್ಯ ವಿಷಯ ಕುರಿತ ದೃಷ್ಟಿಕೋನದಲ್ಲೇ ದೋಷ ಇದೆ. ಆರಂಭಿಕ ಕಲಿಕೆ ಹಂತದ ಮಕ್ಕಳಿಗೆ ಅನಗತ್ಯ ಹೊರೆ ಹೊರಿಸುವುದನ್ನು ಶಿಕ್ಷಣ ತಜ್ಞರು ಮೊದಲಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಅವರಿಗೆ ಅಗತ್ಯ ಅಕ್ಷರ ಜ್ಞಾನ, ಸಣ್ಣ ಲೆಕ್ಕಾಚಾರ ಇವೆಲ್ಲವನ್ನೂ ಯಾವ ಸಾಮಗ್ರಿಯೂ ಇಲ್ಲದೇ ಕಲಿಸಬಹುದು. ಅಷ್ಟೇ ಅಲ್ಲ ಹಾಗೆ ಕಲಿತ ಮಕ್ಕಳು ಹೆಚ್ಚು ಸಮರ್ಥರು ಮತ್ತು ಪ್ರತಿಭಾಶಾಲಿಗಳೂ ಆಗಿರುತ್ತಾರೆ ಎಂದು ಹಲವು ಕಡೆ ನಡೆದ ಪ್ರಯೋಗಗಳೂ ತಿಳಿಸಿವೆ.

ಕನ್ನಡದ ಖ್ಯಾತ ಸಾಹಿತಿ ಶಿವರಾಮ ಕಾರಂತರು ‘ಬಾಲವನ’ ಆರಂಭಿಸಿ ಇದನ್ನು ತೋರಿಸಿ ಕೊಟ್ಟರು. ಈಗಲೂ ಜೆ.ಕೃಷ್ಣಮೂರ್ತಿ ಫೌಂಡೇಶನ್‍ನ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಪುಸ್ತಕರಹಿತ ಕಲಿಕೆ ಯಶಸ್ವಿ ಆಗಿದೆ. ಇಂಥ ಕಡೆ ಕಲಿಕಾ ಸಾಮಗ್ರಿಗಳನ್ನು ಮಕ್ಕಳೇ ತಮ್ಮ ಪರಿಸರದಲ್ಲಿ ಲಭ್ಯ ಇರುವ ಸಾಮಗ್ರಿಗಳಿಂದ ಮಾಡಿಕೊಳ್ಳುತ್ತಾರೆ. ಹಾಗೆ ಮಾಡಲು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಶಿಕ್ಷಕರು ಬೇಕು. ಬ್ರಿಟಿಷರು ಆಳ್ವಿಕೆ ನಡೆಸುವ ಕಾಲಕ್ಕೆ ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಗುಮಾಸ್ತರಾಗಿ ದುಡಿಯಲು ಜನರನ್ನು ತಯಾರು ಮಾಡಲು ಜಾರಿಗೆ ತಂದ ಶಿಕ್ಷಣವನ್ನು ನಾವು ಮುಂದುವರಿಸಿ ಅನಾಹುತ ಮಾಡಿಕೊಂಡಿದ್ದೇವೆ. ಈಗ ಹಿಂದೆ ಹೋಗಲಾಗದ, ಮುಂದಕ್ಕೆ ಹೆಜ್ಜೆ ಇಡಲಾಗದ ಸ್ಥಿತಿಯಲ್ಲಿ ಸಿಕ್ಕಿಕೊಂಡು ನರಳುತ್ತಿದ್ದೇವೆ. ಇಂಜಿನೀಯರಿಂಗ್ ವಿದ್ಯಾಭ್ಯಾಸ ಮುಗಿಸಿ ಬಂದವರಿಗೆ ವೃತ್ತಿಯ ನಿರ್ವಹಣೆ ಮಾಡುವ ಜ್ಞಾನ ಆಗಲೀ ಕೌಶಲ್ಯ ಆಗಲೀ ಇಲ್ಲದಿರುವುದನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಅಂಕಗಳ ಆಧಾರದ ಮೇಲೆ ಪ್ರತಿಭೆ ಅಳೆಯುವ ಕೆಟ್ಟ ಪದ್ಧತಿ ಮತ್ತು ಅದರಿಂದಾಗಿ ಅಂಕಗಳ ಬೆನ್ನು ಹತ್ತಿದ ವಿದ್ಯಾರ್ಥಿ, ಪೋಷಕ ಸಮೂಹ. ಇದನ್ನು ಬಂಡವಾಳ ಮಾಡಿಕೊಂಡು ನಾಯಿ ಕೊಡೆಗಳಂತೆ ತಲೆ ಎತ್ತಿ ಹಣ ದೋಚುತ್ತಿರುವ ಶಿಕ್ಷಣ ಸಂಸ್ಥೆಗಳು.

ಈಗ ಉದ್ಭವಿಸಿರುವ ಸಮಸ್ಯೆಯ ಬೆನ್ನಲ್ಲಿ ಪಠ್ಯ ಮತ್ತು ಕಲಿಕೆ ಕುರಿತು ಗಂಭೀರ ಚಿಂತನೆ ನಡೆಸಿ, ಇಡೀ ಶಿಕ್ಷಣ ರೀತಿ ನೀತಿಯನ್ನು ಆಮೂಲಾಗ್ರವಾಗಿ ಬದಲಿಸಲು ಇದೊಂದು ಸದವಕಾಶ. ಆದರೆ ಇಲ್ಲಿ ಸರ್ಕಾರ ತನ್ನ ಅಹಂಗೆ ಜೋತು ಬಿದ್ದಿದೆ. ಅದಕ್ಕೆ ಶಿಕ್ಷಣ ಒಂದೇ ಆದ್ಯತೆ ಅಲ್ಲ, ಇನ್ನೂ ನೂರೆಂಟು ಸಂಗತಿಗಳ ಜೊತೆ ನಿತ್ಯ ಗುದ್ದಾಡಬೇಕು. ಜೊತೆಗೇ ರಾಜಕೀಯದ ಹುಚ್ಚಾಟಗಳಿಗೂ ಸಿಕ್ಕಿ, ಅದರಿಂದ ಬಿಡಿಸಿಕೊಂಡು ಎದ್ದು ಬರಬೇಕು. ಇಲ್ಲಿ ವ್ಯವಧಾನದಿಂದ ಏನನ್ನೂ ಮಾಡಲು ಸಾಧ್ಯವಿರದೇ ತಾತ್ಕಾಲಿಕ ಪರಿಹಾರಗಳು ಮಾತ್ರ ಸಾಧ್ಯ. ಇದು ಬದಲಾಗಬೇಕೆಂದರೆ ಸುಭದ್ರ ಸರ್ಕಾರ ಮತ್ತು ಸಮಾಜದ ಕಳಕಳಿ ಇರುವ, ಭವಿಷ್ಯ ರೂಪಿಸಬಲ್ಲ ಸಮಗ್ರ ಚಿಂತನೆ ಹೊಂದಿದ ಜನಪ್ರತಿನಿಧಿಗಳು ಇರಬೇಕಾಗುತ್ತದೆ. ಕೇವಲ ಹಣ, ಕಟ್ಟಡ ಮತ್ತು ಒಂದಿಷ್ಟು ಪಠ್ಯ ಗೊತ್ತು ಮಾಡಿ, ಆ ಮೂಲಕ ತನ್ನ ಏನೋ ಸ್ವಾರ್ಥ ಸಾಧಿಸಿಕೊಂಡು ಹೋಗಲು ಇಚ್ಛಿಸುವ ಜನರಿಂದ ಅಗತ್ಯ ಬದಲಾವಣೆ ತರುವುದು ಸಾಧ್ಯ ಇಲ್ಲ.

ನಾವು ಈ ಸಂಗತಿಯನ್ನು ಅರ್ಥ ಮಾಡಿಕೊಳ್ಳದೇ ಸುಮ್ಮನೆ ಎಲ್ಲವನ್ನೂ ಜಟಿಲ ಮಾಡಿಕೊಂಡು ಮಕ್ಕಳ ಭವಿಷ್ಯವನ್ನೇ ಮಸುಕು ಮಾಡುತ್ತಿದ್ದೇವೆ. ಇದು ವರೆಗೂ ಯಾವೊಬ್ಬ ಪೋಷಕನೂ ತನ್ನ ಮಗುವಿಗೆ ಸಿಗುತ್ತಿರುವ ಶಿಕ್ಷಣದ ಗುಣಮಟ್ಟ ಎಂಥದು ಎಂದು ಗಮನಿಸಲು ಹೋಗಿಲ್ಲ. ಇದೇ ರಾಜ್ಯದಲ್ಲಿ ಹೈಸ್ಕೂಲ ಕೂಡ ಮುಗಿಸದ ವ್ಯಕ್ತಿಯೊಬ್ಬ ತನ್ನ ಅಣ್ಣನ ಹೆಸರಲ್ಲಿ ಶಿಕ್ಷಕನಾಗಿ ಹಲವು ವರ್ಷ ಕಾಲ ಕಳೆದು, ಇತ್ತೀಚೆಗೆ ಸಿಕ್ಕಿ ಬಿದ್ದಿದ್ದು ವರದಿ ಆಗಿದೆ. ಹೆಚ್ಚು ಶುಲ್ಕ ವಸೂಲು ಮಾಡುವ ಶಾಲೆಯೇ ಉತ್ತಮ ಶಿಕ್ಷಣ ನೀಡುತ್ತದೆ ಎಂಬ ಭ್ರಮೆಯಲ್ಲಿ ಪೋಷಕರು ಇದ್ದಾರೆ. ಕೆಲವು ಇಂಗ್ಲೀಷ ಪದ ಮಾತಾಡುವುದು ಮಕ್ಕಳಿಗೆ ಬಂದರೆ ಅವರಿಗೆ ಸಂತೋಷವೋ ಸಂತೋಷ. ಇಂಥ ಸ್ಥಿತಿ ಇರುವಾಗ ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಬೇರೆ ಮತ್ತೇನೋ ಪ್ರಯೋಗ ನಡೆದಿದೆ. ಏನು ಕಲಿಸಬೇಕು, ಏಕೆ ಎಂಬುದೇ ಸ್ಪಷ್ಟ ಇಲ್ಲದೇ ಇದ್ದರೂ ತಾವೇ ಮೊದಲು ಈ ಕ್ರಮ ಜಾರಿಗೆ ತಂದವರು ಎಂದು ತೋರಿಸಲು ಕರ್ನಾಟಕ ಇದರ ಅನುಷ್ಠಾನಕ್ಕೆ ಮುಂದಾಗಿದೆ. ಇದೆಲ್ಲದರ ನಡುವೆ ಪಠ್ಯ ಕುರಿತ ಜಟಾಪಟಿ ನಡೆದಿದೆ.

ಪರಿಸ್ಥಿತಿ ಹೀಗಿರುವಾಗ ನೀವು ಮಾಡಬೇಕಾದದ್ದು ಇದು ಎಂದು ತಿಳಿಸಿ ಹೇಳಲು ಹೋಗುವುದು ಕೂಡ ಅಧಿಕಪ್ರಸಂಗತನ ಎನಿಸಿಕೊಳ್ಳುತ್ತದೆ. ಅದೇನೇ ಇರಲಿ, ನಮ್ಮ ಶಿಕ್ಷಣ ವ್ಯವಸ್ಥೆ ಕುರಿತಂತೆ ಆಮೂಲಾಗ್ರ ಬದಲಾವಣೆ ಮಾಡಬೇಕಾದ ಕಾಲದಲ್ಲಿ ಅಯೋಗ್ಯರನ್ನು ನೇಮಿಸಿ ಸಣ್ಣ ಪುಟ್ಟ ಸಂಗತಿಗಳ ಕುರಿತು ಕಚ್ಚಾಟಕ್ಕೆ ತೊಡಗಿರುವುದನ್ನು ನೋಡಿ ಅಸಹ್ಯ ಎನಿಸುತ್ತದೆ. ಇದರ ನಡುವೆಯೇ ಯಾರಾದರೂ ಪ್ರಜ್ಞಾವಂತರು ಎದ್ದು ನಿಂತು ಶಿಕ್ಷಣ ಇದಲ್ಲ, ಶಿಕ್ಷಣದ ಹೆಸರಲ್ಲಿ ಮಕ್ಕಳನ್ನು ಬೆಳೆಸುತ್ತಿರುವ ರೀತಿ ಸರಿಯಲ್ಲ, ಮಕ್ಕಳ ನಡುವೆಯೇ ತಾರತಮ್ಯ ಬಿತ್ತುವ ಈ ಶಿಕ್ಷಣದಿಂದ ಅವರಿಗೂ ಪ್ರಯೋಜನ ಇಲ್ಲ, ದೇಶಕ್ಕೂ ಉಪಯೋಗ ಇಲ್ಲ ಎಂದು ಹೇಳಬೇಕಿದೆ. ಮುಖ್ಯವಾಗಿ ಶಿಕ್ಷಣದಲ್ಲಿಯೂ ತನ್ನ ರಾಜಕೀಯ ಧೋರಣೆ ತುರುಕುವ ಸರ್ಕಾರಗಳ ನಿಲುವಿಗೆ ಪೂರ್ಣ ವಿರಾಮ ಹೇಳುವ ಅಗತ್ಯ ಇದೆ. ಬಹುಷಃ ಅಂಥ ಪ್ರಜ್ಞಾವಂತರು ಇಲ್ಲವೇ ಇಲ್ಲವೇನೋ ಎನಿಸುತ್ತದೆ ಅಥವಾ ಇದ್ದರೂ ಸುಮ್ಮನೆ ಗೋಡೆಗೆ ತಲೆ ಚಚ್ಚಿಕೊಳ್ಳುವ ಉಸಾಬರಿ ಏಕೆ ಬೇಕು ಎಂದು ಅವರೂ ಸುಮ್ಮನಿರಬಹುದು. ಒಳ್ಳೆಯದು ಮಾಡಲಿಕ್ಕೂ ಕಾಲ ಕೂಡಿ ಬರಬೇಕು.
-ಎ.ಬಿ.ಧಾರವಾಡಕರ

You might also like
Leave a comment