This is the title of the web page

ವಿದ್ಯೆ; ಹಣ ಮಾಡುವ ದಂಧೆ

ನಾವು ಪದೇ ಪದೇ ಕೇಳುತ್ತಿದ್ದ ಮಾತು ಇದು. “ಆಸ್ತಿ ಇಲ್ಲದವರಿಗೆ ವಿದ್ಯೆಯೇ ಆಸ್ತಿ”. ಆ ಮಾತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಕೇಳಿಬರುತ್ತಿತ್ತು. ಅದಕ್ಕಾಗಿ ತಂದೆ-ತಾಯಿ ಪಾಡು ಪಡುತ್ತಿದ್ದರು. ಮಕ್ಕಳು ಹೆಚ್ಚಿದ್ದ ಕುಟುಂಬಗಳಲ್ಲಿಯಂತೂ ಯಾರಾದರೊಬ್ಬ ಹೆಚ್ಚಿನ ಓದಿಗೆ ಹೋದರೆ ಬಹಳ ಕಷ್ಟವಾಗುತ್ತಿತ್ತು. ಅದರಲ್ಲೂ ದೂರದ ನಗರಗಳಲ್ಲಿ ಮಾತ್ರ ಉನ್ನತ ಶಿಕ್ಷಣದ ಸವಲತ್ತು ಇದ್ದ ಕಾಲದಲ್ಲಿ ಮನೆಯಿಂದ ಹೊರಬಿದ್ದ ವಿದ್ಯಾರ್ಥಿಗಳ ಪಾಡು ಅವರ್ಣನೀಯ. ಒಂದು ಕಾಲಕ್ಕೆ ಮೈಸೂರು ಭಾಗದಲ್ಲಿ ‘ವಾರಾನ್ನ’ ಮಾಡಿಕೊಂಡು ಓದಿ ದೊಡ್ಡವರಾದವರು ಇದ್ದಾರೆ. ವಾರಾನ್ನ ಎಂದರೆ ಒಂದೊಂದು ದಿನ ಒಬ್ಬೊಬ್ಬ ದಾನಿಯ ಮನೆಗೆ ಹೋಗಿ, ಅವರು ನೀಡುವ ಊಟ ಮಾಡಿ ಬದುಕುವುದು. ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಈ ತೊಂದರೆ ನಿವಾರಿಸಲೆಂದೇ ಧಾರ್ಮಿಕ ಸಂಸ್ಥೆಗಳು ವಸತಿ ನಿಲಯ ಸೌಲಭ್ಯ ಕಲ್ಪಿಸಿದವು.

ಒಟ್ಟಿನಲ್ಲಿ ಓದಿನಲ್ಲಿ ಆಸಕ್ತಿ ಇದ್ದೂ ಉಳಿದ ಅನುಕೂಲ ಇಲ್ಲದವರ ಪಾಡು ಈವತ್ತಿಗೂ ಬದಲಾಗಿಲ್ಲ. ಒಂದು ಕಾಲಕ್ಕೆ ದೇಶ ವಿದೇಶಗಳಿಂದ ನಮ್ಮ ಅಪೂರ್ವ ವಿಶ್ವವಿದ್ಯಾನಿಲಯಗಳಾದ ನಳಂದಾ ಮತ್ತು ತಕ್ಷಶಿಲೆಯಲ್ಲಿ ಕಲಿಯಲೆಂದು ಬರುತ್ತಿದ್ದರು ಎಂದು ಓದಿ ತಿಳಿದಿದ್ದೇವೆ. ಅಂಥ ದೇಶದ ಕೆಲವರು ಇಂದು ಅನಿವಾರ್ಯವಾಗಿ ವಿದೇಶಗಳಲ್ಲಿ ಶಿಕ್ಷಣ ಪಡೆಯಬೇಕಾಗಿದೆ. ಮೊದಲು ಕೇವಲ ಉನ್ನತ ಶಿಕ್ಷಣಕ್ಕಾಗಿ, ಅದೂ ಯಾವುದಾದರೂ ಸ್ಕಾಲರಶಿಪ್ ನೆರವಿನಿಂದ ಯೂರೋಪ್, ಅಮೇರಿಕಗಳಿಗೆ ತೆರಳುತ್ತಿದ್ದರು. ಅಲ್ಲಿ ಕಲಿತು ಬಂದವರ ಬಗ್ಗೆ ವಿಶೇಷ ಗೌರವ ಕೂಡ ಇತ್ತು. ಆನಂತರ ಉದ್ಯೋಗ ಅರಸಿ ಅಮೇರಿಕಾಕ್ಕೆ ಹೋಗುವವರ ಸಂಖ್ಯೆ ಏರಿತು. ಈಗಂತೂ, ಅಮೇರಿಕದಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಪ್ರತಿಷ್ಠೆಯ ವಿಷಯ.

ಎರಡು ವರ್ಷಗಳ ಹಿಂದೆ ಚೀನಾದ ವುಹಾನ್‍ನಲ್ಲಿ ಕೋವಿಡ್ ಕಾಣಿಸಿಕೊಂಡು ಪಿಡುಗಾಗಿ ಹಬ್ಬಿದ ಸಮಯಕ್ಕೆ; ಅಲ್ಲಿ ಸಾಕಷ್ಟು ಭಾರತೀಯ ವಿದ್ಯಾರ್ಥಿಗಳು ಕಲಿಯಲು ಹೋಗಿದ್ದಾರೆ ಎಂದು ಕೇಳಿ ಆಶ್ಚರ್ಯ ಆಯಿತು. ವುಹಾನ್ ಬಹಳ ಮಹತ್ವದ ಶಿಕ್ಷಣ ಕೇಂದ್ರ. ಅದರಲ್ಲೂ ವೈದ್ಯಕೀಯ ಮತ್ತು ಬಯೋ ಕೆಮೆಸ್ಟ್ರಿಯಂಥ ವಿಷಯಗಳಲ್ಲಿ ಅಲ್ಲದೇ ಫಿಸಿಯೋ ಥೆರಪಿ ಕಲಿಸಲು ಅತ್ಯುತ್ತಮ ಸಂಸ್ಥೆಗಳಿವೆ ಎಂದು ತಿಳಿಯಿತು. ಇದರ ಜೊತೆಗೆ ಅಲ್ಲಿ ಭಾರತದಲ್ಲಿ ತಗಲುವ ಖರ್ಚಿಗಿಂತ ಅದೆಷ್ಟೋ ಪಾಲು ಕಡಿಮೆ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರವೇಶ ಪರೀಕ್ಷೆ ಬರೆಯಬೇಕಿಲ್ಲ. ಇಲ್ಲಿನ ಕಾಲೇಜುಗಳಿಗೆ ಕೇವಲ ಭಾರತದಿಂದ ಮಾತ್ರ ಅಲ್ಲ, ಏಶಿಯಾದ ಇತರ ದೇಶಗಳಿಂದ ಕೂಡ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೆ.

ತೀರಾ ಇತ್ತೀಚೆಗೆ ಉಕ್ರೇನ್ ಯುದ್ಧ ಶುರು ಆದಾಗ, ಅಲ್ಲಿ ಕೂಡ ಭಾರತೀಯ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ವೈದ್ಯಕೀಯ ವಿದ್ಯಾರ್ಥಿಗಳು ಎಂದು ದೇಶದ ಜನರಿಗೆ ಗೊತ್ತಾಯಿತು. ಇಡೀ ಜಗತ್ತಿಗೆ ವಿದ್ಯೆ ಕಲಿಸುತ್ತಿದ್ದ ನಾಡಿನ ಜನರು ಈಗ ಬೇರೆ ದೇಶಗಳಿಗೆ ಅನಿವಾರ್ಯವಾಗಿ ವಿದ್ಯೆ ಕಲಿಯಲು ಹೋಗಬೇಕಾದ ಸ್ಥಿತಿ ಬಂದಿದೆ. ಕೇವಲ ಚೀನಾ, ರಶಿಯಾ, ಯುಕ್ರೇನ್ ಮಾತ್ರ ಅಲ್ಲ ಹಿಂದಿನ ಸೋವಿಯೆತ್ ಯುನಿಯನ್ನಿನ ಹೆಚ್ಚಿನ ದೇಶಗಳಲ್ಲಿ ಇಲ್ಲಿಗಿಂತ ಶಿಕ್ಷಣ ಅಗ್ಗ. ಮುಖ್ಯವಾಗಿ ಇಲ್ಲಿನ ಹಾಗೆ ರಗಳೆ ಎದುರಿಸಬೇಕಿಲ್ಲ.

ನಮ್ಮಲ್ಲೀಗ ವಿದ್ಯೆ ಬಹುದೊಡ್ಡ ವ್ಯಾಪಾರವಾಗಿದೆ. ಅದರ ಮೇಲೆ ರಾಜಕಾರಣಿಗಳ ಹಿಡಿತ ಇದೆ. ಒಂದೆಡೆ ಸರ್ಕಾರಿ ಶಾಲೆಗಳಲ್ಲಿ; ನೆಲದ ಮೇಲೆ ಕುಳಿತು ಓದುವ ವರ್ಗ ಇದ್ದರೆ, ಇನ್ನೊಂದೆಡೆ ಏಸಿ ವ್ಯವಸ್ಥೆ ಇರುವ ಶಾಲಾ ಕೊಠಡಿಗಳಲ್ಲಿ ಕುಳಿತು ಕಲಿಯುವ ಇನ್ನೊಂದು ವರ್ಗ ಇದೆ. ಇವರು ಪ್ರವಾಸ ಹೋಗುವುದು ವಿದೇಶಗಳ ಅತಿ ದುಬಾರಿ ವೆಚ್ಚದ ಸ್ಥಳಗಳಿಗೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚೆಂದರೆ ಊರ ಮಗ್ಗುಲಿನ ಯಾವುದಾದರೂ ತಾಣಕ್ಕೆ ಹೋಗಿಬರಬಹುದು ಅಷ್ಟೇ. ಒಂದು ರೀತಿಯಲ್ಲಿ ನಮ್ಮ ಜನ ಶಿಕ್ಷಣದ ಪ್ರತಿ ಹಂತದಲ್ಲಿಯೂ ತಾರತಮ್ಯ ಎದುರಿಸುತ್ತಾರೆ. ಕನ್ನಡ ಮಾಧ್ಯಮದಲ್ಲಿ ಓದಿದವನು ಉನ್ನತ ಶಿಕ್ಷಣ ಪಡೆಯಲು ಅನರ್ಹ ಎಂಬಂಥ ವಾತಾವರಣ ಇದೆ. ಆದರೆ ಕಲಿಯಲು ಆಸಕ್ತಿಯೇ ಇಲ್ಲದ ಯುವಕರನ್ನು ಬಹು ಬೇಡಿಕೆಯ ವೃತ್ತ್ತಿಪರ ಕೋರ್ಸುಗಳಿಗೆ ಸೇರಿಸುವ ತಂದೆ ತಾಯಂದಿರರು ನಮ್ಮಲ್ಲಿ ಇದ್ದಾರೆ. ಅವರು ಮಾಡುವ ಇಂಥ ಹೂಡಿಕೆಯು ಯುವಕನ ಮದುವೆ ಮಾರ್ಕೆಟ್‍ನಲ್ಲಿ ಸೂಕ್ತ ಪ್ರತಿಫಲ ಕೊಡುತ್ತದೆ. ಬಹುಪಾಲು ವೃತ್ತಿಪರ ಶಿಕ್ಷಣ ನೀಡುವ ಸಂಸ್ಥೆಗಳು ಖಾಸಗಿ ಹಿಡಿತದಲ್ಲಿದ್ದು ಅದರಲ್ಲೂ ರಾಜಕೀಯ ಜನರ ಕೈಯಲ್ಲಿ ಇವೆ. ಪ್ರವೇಶಕ್ಕಾಗಿ ಕಠಿನ ನಿಯಮ ತಂದರೂ ಇವರು ತಮ್ಮದೇ ಹರಾಜು ಪ್ರಕ್ರಿಯೆ ಚಾಲೂ ಇಡುತ್ತಾರೆ, ಸೀಟ್ ಬ್ಲಾಕ್ ಮಾಡಿಸುತ್ತಾರೆ. ಕೋಟಿಗಟ್ಟಲೇ ಹಣ ನೀರಿನಂತೆ ಹರಿದು ಬರುತ್ತದೆ.

ಇನ್ನೊಂದು ಕಡೆ ವಿಶ್ವವಿದ್ಯಾನಿಲಯಗಳು ಪ್ರಬಲ ಜಾತಿಗಳ ಶಕ್ತಿ ಕೇಂದ್ರಗಳಂತಾಗಿವೆ. ಇಂಥ ಎಷ್ಟೋ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿದ್ದರೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಎಂದು ಜಾಹೀರಾತು ನೀಡುವ ಮಟ್ಟಕ್ಕೆ ಶಿಕ್ಷಣ ಕುಸಿದಿದೆ. ರಾಜ್ಯದಲ್ಲಿ ಇರುವ ಇಂಜಿನೀಯರಿಂಗ ಮತ್ತು ಮೆಡಿಕಲ್ ಕಾಲೇಜುಗಳ ಸಂಖ್ಯೆ ಗಮನಿಸಿದರೆ, ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳೇ ಹೆಚ್ಚು. ಅಂಥಲ್ಲಿ ವಿದ್ಯೆ ದಾನಕ್ಕೆ ಅಲ್ಲ, ಹಣ ಮಾಡಲಿಕ್ಕೆ. ಎಷ್ಟೋ ಕಾಲೇಜುಗಳಲ್ಲಿ ಸೀಟಿಗಾಗಿ ಕೋಟಿ ಕೋಟಿ ಹಣ ತೆತ್ತ ವಿದ್ಯಾರ್ಥಿ ಕಾಲೇಜಿಗೇ ಬರದೇ ತನ್ನ ಪದವಿ ಪಡೆದು ಹೋಗುತ್ತಾನೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಸುಧಾರಿಸದೇ ಅವನ್ನು ಮುಚ್ಚುವ, ಆ ಮೂಲಕ ಖಾಸಗಿ ವಲಯಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವ ವ್ಯವಸ್ಥಿತ ದಂಧೆ ಶುರುವಾಗಿದೆ. ಅದನ್ನೂ ಮೀರಿ ಈಗೆಲ್ಲ ಶಾಲೆ ಕಾಲೇಜುಗಳು ರಾಜಕೀಯದ ಆಡುಂಬೊಲವಾಗಿ ಮಾರ್ಪಡಿಸುವ ಯತ್ನ ನಡೆಯುತ್ತಿದ್ದು ಶಿಕ್ಷಣದ ಅವನತಿಗೆ ಏನೆಲ್ಲ ಬೇಕೋ ಅದು ನಡೆಯುತ್ತಿದೆ. ಕೆಲವರಾದರೂ ಇದರಿಂದ ಪಾರಾಗಿ, ಕನಿಷ್ಠ ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ಕಲಿಯುವ ಹಂಬಲದಿಂದ ಹೊಸದೊಂದು ದಾರಿ ಹುಡುಕಿದ್ದಾರಲ್ಲಾ ಎಂದಷ್ಟೇ ನಾವು ತೃಪ್ತಿಪಡಬಹುದು.
-ಎ.ಬಿ.ಧಾರವಾಡಕರ

You might also like
Leave a comment