This is the title of the web page

10,000 ಕರವೇ ಕಾರ್ಯಕರ್ತರಿಂದ ಸುವರ್ಣ ಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ

ಬೆಂಗಳೂರು, 19- ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಎಂಇಎಸ್, ಶಿವಸೇನೆ ವಿರುದ್ಧ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದು ಸಂಘಟನೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಕರೆಯಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾರು, ಬಸ್ಸು, ರೈಲುಗಳ ಮೂಲಕ ಬೆಳಗಾವಿಯತ್ತ ಧಾವಿಸುತ್ತಿದ್ದಾರೆ ಎಂದು ಕರವೇ ತಿಳಿಸಿದೆ.

ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಸುಮಾರು 50 ವಾಹನಗಳ ಮೂಲಕ ನೂರಾರು ಕರವೇ ಕಾರ್ಯಕರ್ತರು ರವಿವಾರ ರಾತ್ರಿ ಬೆಂಗಳೂರಿನ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ಹೊರಟಿದ್ದು ರಾಜ್ಯ ಸರ್ಕಾರ ನಮ್ಮ ಕಾರ್ಯಕರ್ತರನ್ನು ತಡೆಯದೇ ಇದ್ದಲ್ಲಿ ನಾಳೆ ಬೆಳಿಗ್ಗೆ ಹೊತ್ತಿಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಬೆಳಗಾವಿ ತಲುಪಲಿದ್ದಾರೆ” ಎಂದು ಕರವೇ ಹೇಳಿದೆ.

“ಸೋಮವಾರ ಮಧ್ಯಾಹ್ನ 12 ಗಂಟೆಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಕರವೇ ಪ್ರಕಟಣೆ ತಿಳಿಸಿದೆ.

ಕರವೇ ಬೇಡಿಕೆಗಳು:

1. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದವರ ಮೇಲೆ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಬೇಕು ಹಾಗೂ ಅವರನ್ನು ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು.

2. ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ಕೂಡಲೇ ಕರ್ನಾಟಕದಲ್ಲಿ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರನ್ನು ಗಡಿಪಾರು ಮಾಡಬೇಕು.

3. ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ ಎಲ್ಲ ಕನ್ನಡಪರ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು.

4. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ, ಕನ್ನಡಿಗರ ಮೇಲೆ, ಕನ್ನಡಿಗರ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸುತ್ತಿರುವ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಒತ್ತಡ ಹೇರಬೇಕು.

You might also like
Leave a comment