This is the title of the web page

ಕೈ ಕಟ್ಟಿ ಕುಳಿತ ಸರ್ಕಾರ

ನಾಡಿನ ವಿದ್ಯಮಾನ ನೋಡಿದರೆ, ಪರಿಸ್ಥಿತಿ ಕೈ ಮೀರಿದೆಯೋ ಅಥವಾ ಹೀಗಾಗಲಿ ಎಂದು ಸರ್ಕಾರ ಕೈ ಕಟ್ಟಿ ಕುಳಿತಿದೆಯೋ ಅರ್ಥ ಆಗುತ್ತಿಲ್ಲ. ಮುಖ್ಯಮಂತ್ರಿಗಳು ಇದ್ದಾರೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದ ಶಾಸಕನನ್ನು ಮುಖ್ಯಮಂತ್ರಿಗಳು ಸದನದಲ್ಲಿ ದಬಾಯಿಸಿ ಕೂರಿಸುತ್ತಾರೆ. ಈಗಂತೂ ಎರಡು ಪ್ರಮುಖ ಸಂಗತಿಗಳು ಗಮನ ಸೆಳೆಯುತ್ತಿವೆ. ಒಂದು ಭಾಷೆ ಕುರಿತದ್ದು, ಇನ್ನೊಂದು ಧರ್ಮ ಕುರಿತದ್ದು.

ಕನ್ನಡದ ‘ಜೇಮ್ಸ’ ಸಿನೆಮಾ ಕುರಿತಂತೆ ಹುಟ್ಟಿರುವ ವಿವಾದ ಕನ್ನಡ ಭಾಷೆ ಎದುರಿಸುತ್ತಿರುವ ವಿಪತ್ತಿನ ಸ್ಪಷ್ಟ ಸೂಚನೆ. ಹಣದ ಮುಂದೆ ಭಾಷೆ ಆದಿ ಪರಿಗಣನೆಗೆ ಬರುವುದಿಲ್ಲ ಎನ್ನುವ ಕಾಲ ಇದಾಗಿದೆ. ಇದರ ಜೊತೆಗೇ, ಹಣ ಮೀರಿದ ರಾಜಕೀಯ ಲಾಭಾಕಾಂಕ್ಷಿಗಳು ನಡೆಸುತ್ತಿರುವ ಕುತಂತ್ರದಿಂದ ಕನ್ನಡ ಸಿನೆಮಾ ಪ್ರದರ್ಶನ ಡೋಲಾಯಮಾನ ಸ್ಥಿತಿ ಮುಟ್ಟಿದೆ. ಒಂದೆಡೆ ಅಧಿಕಾರದಲ್ಲಿ ಇರುವ ಪಕ್ಷದ ಜನ ಈ ಸಿನೆಮಾ ತೆಗೆದು ತಮ್ಮ ನೆಚ್ಚಿನ ‘ದಿ ಕಾಶ್ಮೀರ ಫೈಲ್ಸ’ ಹಿಂದಿ ಸಿನೆಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ತೆಲುಗಿನ ‘ಆರ್‍ಆರ್‍ಆರ್’ ಸಿನೆಮಾ ಬಿರುಗಾಳಿಯಂತೆ ನುಗ್ಗಿ ಕನ್ನಡ ಚಿತ್ರಕ್ಕೆ ಪೆಟ್ಟು ಕೊಡಲು ಯತ್ನಿಸುತ್ತಿದೆ. ಕೆಲವೆಡೆ ಈ ರಾಜಕೀಯ ಒತ್ತಡ ವಿರೋಧಿಸಿ ಅಭಿಮಾನಿಗಳು ಪ್ರದರ್ಶನ, ಪ್ರತಿಭಟನೆ ನಡೆಸಿದರು. ಚಿತ್ರರಂಗದ ಹಿರಿಯ ನಟ ಶಿವರಾಜಕುಮಾರ ಅವರು ಈ ಸ್ಥಿತಿ ಕುರಿತು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದಾರೆ. ಆದರೂ ಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ.

ಮೊದಲೇ ಕನ್ನಡ ಚಿತ್ರರಂಗದ್ದು ಸೀಮಿತ ಮಾರುಕಟ್ಟೆ. ಭಾರಿ ಬಜೆಟ್‍ನ ಕನ್ನಡ ಸಿನೆಮಾಗಳ ಬಿಡುಗಡೆ ಸಮಯಕ್ಕೆ ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆ ಸಿನೆಮಾಗಳು ಪೈಪೋಟಿಗೆ ಇಳಿದರೆ ನಷ್ಟ ಅಗುವುದು ಕನ್ನಡ ಸಿನಿಮಾಕ್ಕೆ. ಈಗಾಗಲೇ ಕೆಜಿಎಫ್ 2 ಬಿಡುಗಡೆ ಸಮಯದಲ್ಲಿ ಅಮೀರ ಖಾನ್ ಅಭಿನಯದ ಸಿನೆಮಾ ಟಕ್ಕರ್ ನೀಡುವ ಸುದ್ದಿ ಇತ್ತು. ಆದರೆ ಕನ್ನಡ ಚಿತ್ರ ನಿರ್ಮಾಪಕ ಮತ್ತು ನಾಯಕ ನಟ ಗುಡುಗಿದ ಪರಿಣಾಮ ಸದ್ಯಕ್ಕೆ ಹಿಂದಿ ಸಿನೆಮಾ ನಿರ್ಮಾಪಕರು ಹಿಂದೆ ಸರಿದಿದ್ದಾರೆ. ಇಂಥ ಸಮಯದಲ್ಲಿ ಪುನೀತ ಬದುಕಿದ್ದರೆ ಸ್ಥಿತಿ ಬೇರೆ ಇರುತ್ತಿತ್ತೇ? ಎನ್ನಿಸಬಹುದು. ಆದರೆ ಕೋವಿಡ್ ಕಾರಣದಿಂದ ಇದೇ ನಟನ ‘ಯುವರತ್ನ’ ಸಿನೆಮಾಗೆ ಸಿಗಬೇಕಾದ ಯಶಸ್ಸು ಸಿಗಲಿಲ್ಲ ಎಂಬುದನ್ನು ನಾವು ಮರೆಯಬಾರದು. ಈ ಎಲ್ಲ ಸಂಗತಿಗಳು ಕನ್ನಡದ ನಾಜೂಕು ಸ್ಥಿತಿ ಬಿಂಬಿಸುತ್ತವೆ. ಈ ಸಂದರ್ಭದಲ್ಲಿ ಎಲ್ಲ ನಟರ ಅಭಿಮಾನಿಗಳು ಒಂದಾಗಿ ಕನ್ನಡ ಸಿನೆಮಾ ರಕ್ಷಣೆಗೆ ನಿಲ್ಲಬೇಕು. ಆಗ ಮಾತ್ರ ಕನ್ನಡ ಸಿನೆಮಾಗಳಿಗೆ ಸ್ವಲ್ಪ ಭರವಸೆಯ ವಾತಾವರಣ ಮೂಡುತ್ತದೆ. ಈಗಾಗಲೇ ಡಬ್ಬಿಂಗ್‍ನಿಂದಾಗಿ ಪೆಟ್ಟು ತಿಂದಿರುವ ಕನ್ನಡ ಚಿತ್ರಗಳಿಗೆ ಮುಂದಿನ ದಿನಗಳು ಇನ್ನೂ ಕಷ್ಟ ತರಲಿವೆ. ರಂಗದ ನೆರವಿಗೆ ಬರಬೇಕಾದ ಸರ್ಕಾರ ಮತ್ತು ಗಟ್ಟಿ ನಿಲುವು ತಳೆಯಬೇಕಾದ ಫಿಲ್ಮ ಚೇಂಬರ್ ಮತ್ತು ಸಿನೆಮಾಕ್ಕೆ ಸಂಬಂಧಿಸಿದ ಇತರ ಸಂಘಟನೆಗಳು ಎಚ್ಚೆತ್ತುಕೊಂಡು ಕ್ರಿಯಾಶೀಲರಾಗದೇ ಇದ್ದಲ್ಲಿ ಕನ್ನಡ ಚಿತ್ರರಂಗವು ಭಾರಿ ಹಿನ್ನಡೆ ಅನುಭವಿಸುವುದು ಖಚಿತ.

ಇನ್ನು ಧರ್ಮದ ವಿಚಾರದಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ ಆರಂಭವಾದ ವಿಚಿತ್ರ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಬೇಸಿಗೆ ಶುರುವಾಗುತ್ತಿದ್ದಂತೆ ಜಾತ್ರೆ, ರಥೋತ್ಸವ, ತೇರು ಜರುಗುವ ಕಾಲ ಶುರುವಾಗುತ್ತದೆ. ಇಂಥ ಕಡೆಗಳಲ್ಲಿ ಅಂಗಡಿ ಇಡುವ ಜನರ ಪ್ರತ್ಯೇಕ ಗುಂಪೇ ಇರುತ್ತದೆ. ಸಂತೆ ಸಂತೆಗಳಿಗೆ ಹೋಗಿ ವ್ಯಾಪಾರ ಮಾಡುವಂತೆ ಇವರು ಜಾತ್ರೆಗಳಿಗೆ ಹೋಗಿ ವ್ಯಾಪಾರ ಮಾಡಿಕೊಂಡು, ನಾಲ್ಕು ದುಡ್ಡು ಸಂಪಾದಿಸುತ್ತಾರೆ. ಈಗ ಇದಕ್ಕೂ ಕುತ್ತು ಬರುವ ಲಕ್ಷಣ ಕಾಣುತ್ತಿದೆ. ನಿರ್ದಿಷ್ಟ ಸಮುದಾಯದ ವ್ಯಾಪಾರಿಗಳು ಅಂಗಡಿ ಹಾಕಲು ಅನುಮತಿ ನೀಡಬಾರದು ಎಂದು ಕೆಲವು ಸಂಘಟನೆಗಳು ಪಟ್ಟು ಹಿಡಿದಿವೆ. ಇದಕ್ಕೆ ಯಾವುದೇ ತಾತ್ವಿಕ ಮತ್ತು ಕಾನೂನಾತ್ಮಕ ನೆಲಗಟ್ಟು ಇಲ್ಲವಾದರೂ ನಿರ್ದಿಷ್ಟ ಸಮುದಾಯವನ್ನು ಪ್ರತ್ಯೇಕಿಸಿ ದುರ್ಬಲ ಮಾಡುವುದು ಮತ್ತು ಅವರಿಗೆ ತೊಂದರೆ ಕೊಡುವುದು ಈ ಹುನ್ನಾರದ ಹಿಂದಿನ ಉದ್ದೇಶ ಕಾಣುತ್ತಿದೆ. ಈ ಹಂತದಲ್ಲಿ ಗಟ್ಟಿ ನಿಲುವು ತೆಗೆದುಕೊಂಡು ಇದನ್ನೆಲ್ಲ ತಡೆಯಬೇಕಾದ ಸರ್ಕಾರ ಕೈಕಟ್ಟಿ ಕುಳಿತು ತಮಾಷೆ ನೋಡುತ್ತಿರುವಂತೆ ಕಾಣುತ್ತಿದೆ. ಇದು ಬೇಕಂತಲೇ ತಳೆದ ನಿಲುವೋ ಅಥವಾ ಇದರಿಂದ ತಮಗೆ ಅನುಕೂಲ ಆಗುವಾಗ ಅದಕ್ಕೇಕೆ ತಡೆ ಒಡ್ಡಬೇಕು ಎಂಬ ಸ್ವಾರ್ಥವೋ ತಿಳಿಯದು.

ಸಮಾಜ ಒಡೆಯುವ ಶಕ್ತಿಗಳನ್ನು ತಡೆಯುವುದು ಸರ್ಕಾರದ ನೈತಿಕ ಜವಾಬ್ದಾರಿ. ಆದರೆ ಮತ್ತೆ ಮತ್ತೆ ತನಗೆ ನೈತಿಕತೆಯೇ ಇಲ್ಲ ಎಂದು ಸಾಬೀತು ಮಾಡುವಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರದ ಹೊಣೆಗೇಡಿತನದಿಂದ ಆಗುವ ಅನಾಹುತ ತಪ್ಪಿಸಲು ಕಾನೂನಾತ್ಮಕ ಹೋರಾಟ ಕೈಗೊಳ್ಳುವುದು ಒಂದೇ ದಾರಿ ಎಂದು ಕಾಣುತ್ತದೆ. ಆದರೆ ನ್ಯಾಯ ವಿತರಣೆಯ ವಿಳಂಬದ ಕಾರಣ ತೀರ್ಮಾನ ಬರುವಷ್ಟರಲ್ಲಿ ಆಗಬಾರದ ಅನಾಹುತ ನಡೆದು ಹೋಗಿರುತ್ತದೆ ಎಂಬುದರ ಕುರಿತು ನಾಡಿನ ಜನರೆಲ್ಲ ತುರ್ತಾಗಿ ಚಿಂತಿಸಬೇಕಿದೆ.
-ಎ.ಬಿ.ಧಾರವಾಡಕರ

You might also like
Leave a comment