ಬೆಳಗಾವಿ : ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಜಾಂಬೋಟಿ ಮೂಲಕ ಬೆಳಗಾವಿ-ಗೋವಾ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಪಕ್ಕದಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಸ್ತೆ ರವಿವಾರ ಬೆಳಗಿನ ಜಾವ 1.30 ರ ಸುಮಾರಿಗೆ ನೀರಿನಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ. ಆದರೆ ಜನರಿಗೆ ರಸ್ತೆ ಕೊಚ್ಚಿ ಹೋಗಿರುವ ಮಾಹಿತಿ ಇಲ್ಲದ್ದರಿಂದ ಅಲ್ಲಿಯ ವರೆಗೆ ಹೋಗಿ ವಾಹನಗಳು ಮರಳುವ ದೃಶ್ಯ ಕಂಡು ಬಂತು.
ಮಲಪ್ರಭಾ ನದಿಯ ಒಳ ಹರಿವು ಹೆಚ್ಚಾದ ಪರಿಣಾಮ ರಸ್ತೆ ಕೊಚ್ಚಿ ಹೋಗಿದ್ದು ಪ್ರಯಾಣಿಕರು ಬೇರೆ ಮಾರ್ಗದ ಮೂಲಕ ಗೋವಾಕ್ಕೆ ತೆರಳಲು ಸೂಚಿಸಲಾಗಿದೆ.