ಬೆಂಗಳೂರು: ಭ್ರಷ್ಟಾಚಾರ ನಿಗ್ರಹದಳವನ್ನು ಹೈಕೋರ್ಟ ಆದೇಶದಿಂದಾಗಿ ರದ್ದುಗೊಳಿಸಿ, ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆಂಜನಮೂರ್ತಿಯವರು ನಡವಳಿಯನ್ನು ಹೊರಡಿಸಿದ್ದು, ಭ್ರಷ್ಟಾಚಾರ ತಡೆ ಅಧಿನಿಯ 1988ರನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಹಾಗೂ ಪ್ರಕರಣಗಳನ್ನು ಸ್ವತಂತ್ರವಾಗಿ ತನಿಖೆ ಮಾಡಲು ವಿವಿಧ ವೃಂದದ ಹುದ್ದೆಗಳೊಂದಿಗೆ ಒಂದು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹದಳವನ್ನು ಸೃಜಿಸಲಾಗಿತ್ತು ಎಂದು ತಿಳಿಸಿದ್ದಾರೆ.
ದಿನಾಂಕ 11-08-2022ರಂದು ಮಾನ್ಯ ಉಚ್ಚನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿದೆ.
ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ, ರಾಜ್ಯವ್ಯಾಪಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡೆದಿದೆ.
ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು, ವಿಚಾರಣೆಗಳು, ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ.