This is the title of the web page

ಕೃಷಿ ಕಾಯ್ದೆ

ಜಾರಿಗೆ ತಂದಿದ್ದ ಮೂರೂ ಕೃಷಿ ಕಾಯ್ದೆಗಳನ್ನು ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈ ವಿಷಯವನ್ನು ನಿನ್ನೆ ಪ್ರಧಾನಿ ಹೇಳಿದ್ದಾರೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಮೂರು ಕೃಷಿ ಕಾಯಿದೆಗಳ ರದ್ದತಿಗಾಗಿ ಕ್ರಮ ಜರುಗಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ತಾವು ತಂದಿದ್ದ ಕೃಷಿ ಕಾಯಿದೆಗಳನ್ನು ದೇಶದ ಕೋಟ್ಯಾನುಕೋಟಿ ರೈತರು ಬೆಂಬಲಿಸಿದ್ದರು ಎಂದು ಹೇಳಿ, ಅವರಿಗೆ ಧನ್ಯವಾದಗಳನ್ನೂ ಅವರು ಸಂದರ್ಭದಲ್ಲಿ ಅರ್ಪಿಸಿದರು.

ಈ ರದ್ದತಿಗೆ ಕಾರಣ ಏನು ಎಂದು ಬಹುಪಾಲು ಜನರಿಗೆ ಅರ್ಥ ಆಗಿದೆ. ಅದನ್ನು ವಿವರಿಸಿ ಹೇಳಬೇಕಾಗಿಲ್ಲ. ಒಂದು ಸಂಗತಿ ಗಮನಿಸಬೇಕು. ಈ ಸರ್ಕಾರ ಬಂದಾಗಿನಿಂದ ಜಾರಿಗೆ ತಂದಿರುವ ಪ್ರಮುಖ ನಿರ್ಧಾರಗಳನ್ನು ತಾನೇ ತಿದ್ದುವ, ರದ್ದು ಮಾಡುವ ಪ್ರವೃತ್ತಿ ಎದ್ದು ಕಾಣುತ್ತಿದೆ. ಇದು ಆರಂಭ ಆದದ್ದು 2016ರ ನವೆಂಬರ್ 8 ರಂದು. ಅಂದು ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ನೋಟು ಅಮಾನ್ಯೀಕರಣ ಘೋಷಿಸಿದರು. ಇದರಿಂದ ಆಗುವ ಲಾಭ ಕುರಿತು ಮನವರಿಕೆ ಮಾಡಿಕೊಡುವ ಮಾತು ಆಡಿದರು. ಕಪ್ಪು ಹಣ ನಾಶ ಮತ್ತು ಭಯೋತ್ಪಾದನಾ ದಮನ ಇದರಿಂದ ಆಗಲಿದೆ ಎಂದು ಜನರಿಗೆ ಹೇಳಿದರು. ಆದರೆ ನೋಟು ಅಮಾನ್ಯೀಕರಣ ಕುರಿತು ತಂದಿದ್ದ ನಿಬಂಧನೆಗಳನ್ನು ಪದೇ ಪದೇ ಬದಲಾಯಿಸುತ್ತ ಹೋದರು. ಇಷ್ಟಾಗಿಯೂ ಪ್ರಧಾನಿ ಹೇಳಿದ್ದ ಉದ್ದೇಶ ಸಾಧನೆ ಆಗಿದೆಯೇ ಎಂದರೆ, ಅದಕ್ಕೆ ಸರ್ಕಾರದಿಂದ ಉತ್ತರ ಇಲ್ಲ. ಅಮಾನ್ಯೀಕರಣದಿಂದ ಲಾಭ ಆಗಿದ್ದಕ್ಕಿಂತ ನಷ್ಟವೇ ಹೆಚ್ಚು, ಈ ಕ್ರಮದಿಂದ ಕುಸಿದ ಅರ್ಥ ವ್ಯವಸ್ಥೆ ಇಂದಿಗೂ ಚೇತರಿಸಿಕೊಂಡಿಲ್ಲ ಎಂದು ತಜ್ಞರು ಹೇಳುತ್ತಾರೆ. ಇದಾದ ನಂತರ ಗಡಿಬಿಡಿಯಲ್ಲಿ ಜಿಎಸ್‍ಟಿ ತಂದರು. ಜುಲೈ 1, 2017 ರಂದು ಇದೊಂದು ಬಹುಮುಖ್ಯ ಕ್ರಮ ಎಂದು ಬಿಂಬಿಸಲು ರಾತ್ರಿ ಹನ್ನೆರಡು ಗಂಟೆ ವೇಳೆಗೆ ಸಂಸತ್ ಭವನದಲ್ಲಿ ಜಾರಿಗೆ ತರಲಾಯಿತು. ಆಗ ಇಡೀ ಭವನ ದೀಪಾಲಂಕೃತ ಆಗಿತ್ತು. ಇದರಿಂದ ಲಾಭವೋ ಲಾಭ ಎಂದು ಸರ್ಕಾರ ಹೇಳಿತು. ಯಾರಿಗೆ ಎಂದು ಬಾಯಿ ಬಿಡಲಿಲ್ಲ. ಆವತ್ತು ಜಾರಿ ಆದ ಈ ತೆರಿಗೆ ನೀತಿಗೆ ಈವತ್ತೂ ತಿದ್ದುಪಡಿಗಳು ಜಾರಿ ಆಗುತ್ತಲೇ ಇವೆ. ಆದರೂ ವ್ಯವಸ್ಥೆ ಸರಿಹೋದ ಹಾಗೆ ಕಾಣುತ್ತಿಲ್ಲ. ನೋಟು ಅಮಾನ್ಯೀಕರಣದಿಂದ ಸಾಮಾನ್ಯ ಜನ ತತ್ತರಿಸಿದರೆ, ಹೊಸ ತೆರಿಗೆ ನೀತಿಯಿಂದ ಅನೌಪಚಾರಿಕ ಕ್ಷೇತ್ರದ ಜನ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಪೆಟ್ಟು ತಿಂದವು. ಈವತ್ತಿಗೂ ಕೂಡ ಅವು ಚೇತರಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ.

ಕೊರೋನಾ ಕಾಲದಲ್ಲಿ ಅಷ್ಟೇನೂ ಸೋಂಕು ಪ್ರಬಲ ಆಗಿಲ್ಲದ ಕಾಲಕ್ಕೆ ಕೇವಲ ನಾಲ್ಕು ಗಂಟೆಯ ಕಾಲಾವಕಾಶ ನೀಡಿ ಇದ್ದಕ್ಕಿದ್ದ ಹಾಗೆ ದೇಶದಲ್ಲಿ ಲಾಕಡೌನ್ ಘೋಷಿಸಲಾಯಿತು. ನಗರಗಳು ಬಂದ್ ಬಿದ್ದವು. ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡರು. ತಮ್ಮ ಊರುಗಳತ್ತ ತೆರಳಲು ವಾಹನ ಸೌಕರ್ಯ ಇಲ್ಲದ ಕಾರಣ ನಡೆದೇ ಊರು ಸೇರಲು ನಿರ್ಧರಿಸಿ ಹೊರಟ ಲಕ್ಷಾಂತರ ಮಂದಿ ಊಟ ಇಲ್ಲದೇ, ಕುಡಿಯಲು ನೀರಿಲ್ಲದೇ ಬಳಲಿದರು. ಎಷ್ಟೋ ಜನ ಸತ್ತರು. ಹಾಗೆ ಸತ್ತವರ ಲೆಕ್ಕ ಕೂಡ ಸರ್ಕಾರದ ಬಳಿ ಇರಲಿಲ್ಲ. ಇದೆಲ್ಲ ಕಳೆದು ಮತ್ತೆ ಜನಜೀವನ ಎಂದಿನಂತೆ ಆಗಲಿದೆ ಎಂದು ಭಾವಿಸಿದ ಕಾಲಕ್ಕೆ ಅಪ್ಪಳಿಸಿದ ಕೊರೋನಾ ಎರಡನೇ ಅಲೆಯ ಹೊಡೆತ ಎದುರಿಸಲು ಸರ್ಕಾರ ಸಜ್ಜಾಗಿರಲೇ ಇಲ್ಲ. ಪರಿಣಾಮ ಲೆಕ್ಕ ಇಲ್ಲದಷ್ಟು ಜನ ಸೂಕ್ತ ಚಿಕಿತ್ಸೆ ದೊರೆಯದೇ ಸತ್ತರೆ, ಲಕ್ಷಾಂತರ ಜನ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಸತ್ತರು. ಸತ್ತವರನ್ನು ಹೂಳಲು ಕೂಡ ಹಣ ಇಲ್ಲದ ಬಡವರು ನದೀ ತೀರಗಳಲ್ಲಿ ಹೆಣಗಳನ್ನು ಮಣ್ಣು ಮಾಡಿದರೆ, ಇನ್ನೂ ಹಲವರು ನದಿಗಳಲ್ಲೇ ಹೆಣಗಳನ್ನು ತೇಲಿ ಬಿಟ್ಟರು. ಕೆಲವೇ ನೂರು ರೂಪಾಯಿ ಬೆಲೆಯ ಒಂದು ಆಕ್ಸಿಜನ್ ಸಿಲಿಂಡರ್ ಬೆಲೆ ಗಗನಕ್ಕೇರಿತು. ಹಣ ಕೊಟ್ಟರೂ ಸಿಗದ ಭಯಾನಕ ಪರಿಸ್ಥಿತಿ ಇತ್ತು. ಚಿಕಿತ್ಸೆಗೆ ಆಕ್ಸಿಜನ್ ದೊರೆಯದೇ ಸತ್ತವರು ಅದೆಷ್ಟೋ ಮಂದಿ. ಆದರೆ ಆಮ್ಲಜನಕ ಕೊರತೆಯಿಂದ ಯಾರೂ ಸಾಯಲಿಲ್ಲ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಲಾಯಿತು. ಈ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ಧತಿ. ಅದನ್ನು ಯಾವಾಗ ವಾಪಸ್ಸು ಪಡೆಯುತ್ತಾರೋ ತಿಳಿಯದು. ಅಲ್ಲಿ ನಡೆಯುತ್ತಿರುವ ವಿದ್ಯಮಾನ ನೋಡಿದರೆ, ರದ್ದತಿ ಕ್ರಮ ನುಂಗಲಾರದ ತುತ್ತಾಗಿದೆ.

ಇದಾದ ನಂತರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ದೇಶದ ಎಲ್ಲರೂ ಕರಾಳ ಶಾಸನ ಎಂದೇ ಹೇಳಿದರು. ರೈತರ ಜೊತೆ ಯಾವುದೇ ಮಾತುಕತೆ ನಡೆಸದೇ ಜಾರಿಗೆ ತಂದ ಈ ಶಾಸನ ವಿರೋಧಿಸಿ ಕಳೆದ ಒಂದು ವರ್ಷದಿಂದ ರೈತರು ದೆಹಲಿ ಗಡಿ ಭಾಗದಲ್ಲಿ ಮುಷ್ಕರ ಹೂಡಿ ಕುಳಿತಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕೆಂಬ ಒತ್ತಾಯ ಇತ್ತು. ಆದರೆ ಕಾಟಾಚಾರಕ್ಕೆ ಜರುಗಿದ ಮಾತುಕತೆ ಕೇವಲ ಕಣ್ಣೊರೆಸುವ ತಂತ್ರ ಆಗಿತ್ತು. ಈ ಮುಷ್ಕರದಲ್ಲಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ಮಾತ್ರ ಪಾಲ್ಗೊಂಡಿದ್ದರು ಎಂದು ಬಿಂಬಿಸಲು ಸರ್ಕಾರ ಯತ್ನಿಸುತ್ತಾ ಬಂದಿದೆ. ಮುಷ್ಕರ ನಡೆಸುತ್ತಾ ಇರುವವರು ರೈತರೇ ಅಲ್ಲ, ಅವರು ದೇಶದ್ರೋಹಿಗಳು, ಖಲಿಸ್ತಾನಿಗಳು, ದಲ್ಲಾಳಿಗಳು, ಮಾವೋವಾದಿಗಳು, ಪಾಕಿಸ್ತಾನಿಗಳು ಎಂದೆಲ್ಲ ಸರ್ಕಾರದ ಬೆಂಬಲಿಗರು ಕಳೆದ ಒಂದು ವರ್ಷದಿಂದ ಬಿಂಬಿಸುವ ಯತ್ನ ನಡೆಸುತ್ತಾ ಬಂದಿದ್ದಾರೆ. ಅಂಥ ಜನರ ಬೇಡಿಕೆ ಒಪ್ಪಿ ಸರ್ಕಾರ ಈಗ ತಾನೇ ಜಾರಿಗೆ ತಂದ ಶಾಸನ ರದ್ದು ಮಾಡುವ ಕೆಲಸಕ್ಕೆ ಮುಂದಾಗಿದೆ.

ಈ ಘೋಷಣೆಯಿಂದ ಮುಷ್ಕರ ಹೂಡಿರುವ ರೈತರು ತಕ್ಷಣ ಅವರವರ ಊರು, ಮನೆಗಳಿಗೆ ವಾಪಸು ಹೋಗುವುದಿಲ್ಲ, ಸಂಸತ್ತಿನಲ್ಲಿ ಶಾಸನಗಳ ರದ್ದತಿ ಆದ ನಂತರವೇ ಮುಷ್ಕರ ನಿಲ್ಲಿಸುವುದಾಗಿ ಭಾರತ ಕಿಸಾನ್ ಯೂನಿಯನ್‍ನ ರಾಕೇಶ ಟಿಕಾಯತ್ ಹೇಳಿದ್ದಾರೆ. ಇದೂ ಅಲ್ಲದೇ, ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು ಎಂಬ ಬೇಡಿಕೆ ಕೂಡ ಇದ್ದು, ಅದರ ಕುರಿತು ಸರ್ಕಾರ ಏನೂ ಹೇಳಿಲ್ಲ. ಆದ ಕಾರಣ ಆ ಬೇಡಿಕೆ ಈಡೇರಿಕೆಗೆ ಮತ್ತೇನು ಮಾಡಬೇಕು ಎನ್ನುವ ಆಲೋಚನೆಯನ್ನು ಮುಷ್ಕರ ಹೂಡಿರುವ ರೈತರು ಮಾಡುವುದು ಖಚಿತ. ಒಂದು ಸಂಗತಿ ಗಮನಿಸಬೇಕು. ಕೃಷಿ ಕಾನೂನು ತಂದ ಮೇಲೆ ಮುಷ್ಕರ ನಿರತ ರೈತರಲ್ಲಿ ಏಳು ನೂರಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಲಖೀಮಪುರ ಖೇರಿ ಪ್ರಸಂಗದಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ರೈತರ ಗುಂಪಿನ ಮೇಲೆ ಕೇಂದ್ರ ಮಂತ್ರಿಯ ಮಗ ವಾಹನ ಹರಿಸಿ ನಾಲ್ಕು ಜನರನ್ನು ಕೊಂದಿದ್ದೂ ಅಲ್ಲದೇ ಗುಂಡು ಹಾರಿಸಿ ಇನ್ನೂ ಕೆಲವರ ಕೊಲೆ ಮಾಡಿದ್ದಾನೆ. ಸರ್ಕಾರ ಸ್ವಲ್ಪ ತಾಳ್ಮೆ ವಹಿಸಿದ್ದರೆ ಈ ಎಲ್ಲ ಅನಾಹುತಗಳನ್ನೂ ತಪ್ಪಿಸಬಹುದಿತ್ತು.

You might also like
Leave a comment