This is the title of the web page

ಅಹಮದಾಬಾದ ಸರಣಿ ಸ್ಫೋಟ ಪ್ರಕರಣ; 38 ಜನರಿಗೆ ಮರಣದಂಡನೆ

ಅಹಮದಾಬಾದ, ಫೆ 18- 2008ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು  49 ಜನರ ಪೈಕಿ 38 ಮಂದಿಗೆ ಗುಜರಾತ್‌ನ ವಿಶೇಷ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಹನ್ನೊಂದು ಮಂದಿಗೆ ಸಾಯುವ ತನಕ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 77ಕ್ಕೂ ಅಧಿಕ ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿತ್ತು. 2021ರ ಸೆಪ್ಟೆಂಬರ್ ತಿಂಗಳಲ್ಲಿ ವಿಚಾರಣೆ ಪೂರ್ಣಗೊಂಡಿತ್ತು. ಸುಮಾರು 13 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿದ್ದು, 49 ಮಂದಿ ತಪ್ಪಿತಸ್ಥರು ಎಂದು ಮಂಗಳವಾರ ಕೋರ್ಟ ಆದೇಶ ನೀಡಿತ್ತು. ಶಿಕ್ಷೆ ಪ್ರಮಾಣವನ್ನು ಇಂದು ವಿಶೇಷ ನ್ಯಾಯಾಲಯದ ಜಡ್ಜ್ ಎ.ಆರ್ ಪಟೇಲ ಘೋಷಿಸಿದರು.

ಭಾರತೀಯ ದಂಡ ಸಂಹಿತೆ, ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದ್ದು ಶಸ್ತ್ರಾಸ್ತ್ರ ಕಾಯ್ದೆಯಡಿಯೂ ಒಬ್ಬ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.

2008ರ ಜುಲೈ 26ರಂದು ಗುಜರಾತ ರಾಜ್ಯ ಅಹಮದಾಬಾದ್‌ನ 21 ಕಡೆಗಳಲ್ಲಿ 70 ನಿಮಿಷಗಳ ಅಂತರದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದವು. 56 ಜನರು ಸ್ಫೋಟಗಳಲ್ಲಿ ಮೃತಪಟ್ಟು 200ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಫೋಟ ನಡೆಸುವ ಕುರಿತು ಉಗ್ರರು ಪೊಲೀಸರಿಗೆ ಇ ಮೇಲ್ ಕಳಿಸಿದ್ದರು. ಇ ಮೇಲ್ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಕೆಲವೇ ಕ್ಷಣಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು.

ಅಹಮದಾಬಾದ್‌ನಲ್ಲಿ ಸರಣಿ ಸ್ಫೋಟಗಳು ನಡೆದ ಕೆಲ ದಿನಗಳ ನಂತರ, ಪೊಲೀಸರು ಸೂರತ್‌ನ ವಿವಿಧ ಭಾಗಗಳಿಂದ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದರು. ಅಹಮದಾಬಾದ್‌ನಲ್ಲಿ 20 ಮತ್ತು ಸೂರತ್‌ನಲ್ಲಿ 15 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.

ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ)ಯ ಮೂಲಭೂತವಾದಿಗಳ ಬಣವಾದ ಇಂಡಿಯನ್ ಮುಜಾಹಿದೀನ್ (ಐಎಂ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಜನರು ಸ್ಫೋಟಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು.

2002 ರ ಗೋಧ್ರಾ ಘಟನೆಯ ನಂತರ ಗುಜರಾತ್ ರಾಜ್ಯದೆಲ್ಲೆಡೆ ನಡೆದ ಮುಸ್ಲಿಮರ ನರಸಂಹಾರಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಐಎಂ ಭಯೋತ್ಪಾದಕರು ಈ ಸ್ಫೋಟಗಳನ್ನು ಯೋಜಿಸಿದ್ದರು ಎನ್ನಲಾಗಿದೆ.

You might also like
Leave a comment