This is the title of the web page

ಸಂಭ್ರಮದ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವ

ಅಳ್ನಾವರ, 1- ಇಲ್ಲಿನ ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದ 5 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮಂಗಳವಾರ ಶ್ರದ್ದಾ, ಭಕ್ತಿಯಿಂದ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜಾ ಮೂರ್ತಿಗಳಾದ ವೀರಭದ್ರೇಶ್ವರ, ನಂದಿ, ಈಶ್ವರ, ಗಣೇಶ, ನಾಗದೇವತಾ, ಕಾಳಿಕಾ ದೇವಿಗೆ ವಿಶೇಷ ಅಭಿಷೇಕ ಶ್ರದ್ದೆಯಿಂದ ನಡೆಯಿತು.
ಸಕಲ ಧಾರ್ಮಿಕ ಕೈಕಂರ್ಯಗಳು ಸಾಂಗವಾಗಿ ಜರುಗಿದವು. ಅಭಿಷೇಕ ಮಾಡಲು ಇಚ್ಚಿಸುವವರು ಅರ್ಚಕರಲ್ಲಿ ಹೆಸರನ್ನು ನೊಂದಾಯಿಸಿದ್ದರು.

ನಂತರ ಮುಖ್ಯ ಆಕರ್ಷಣೆ ಶಿಗ್ಗಾಂವಿಯ ಸೋಮಣ್ಣ ಚೆನ್ನೂರ ನೇತ್ರತ್ವದ ವೀಭದ್ರೇಶ್ವರ ಪುರಂವತರ ತಂಡದವರ ವೀರಗಾಸೆ ಪ್ರದರ್ಶನದ ನೃತ್ಯ ಭಕ್ತರ ಮನ ಕಲುಕಿತ್ತು.
ವೀರಾವೇಶದ ನುಡಿ ಗುಟ್ಟುಗಳು, ವಡಪದ ಮೂಲಕ ವೀರಭದ್ರನ ಚರಿತ್ರೆ ಬಿಂಬಿಸುವ ಮೂಲಕ ಭಕ್ತಿ ಲೋಕ ಸೃಷ್ಟಿಸಿದ್ದರು.

ಪುರವಂತರ ಮೆರವಣಿಗೆ ಮುಖ್ಯ ಬೀದಿಯಲ್ಲಿ ಸಂಚರಿಸಿತು. ಏಳು ಮಕ್ಕಳ ತಾಯಿ ಆಲಯ, ಅಂಭಾ ಭವಾನಿ ಗುಡಿ, ಗಣೇಶ ದೇವಸ್ಥಾನ, ಬಂಡೆಮ್ಮ ದೇವಸ್ಥಾನ, ಹನಮಂತ ದೇಸಸ್ಥಾನ, ವಿಠ್ಠಲ ದೇವಸ್ಥಾನದ ಎದುರು ತಂಡ ಬಂದಾಗ ವಿಶೇಷ ಪೂಜೆ ನಡೆಯಿತು. ಪುರವಂತರು ಬಾರಿಸುವ ವಿಶೇಷ ವಾದ್ಯಗಳ ಸಪ್ಪಳದ ನಿನಾದ ಪಟ್ಟಣದ ತುಂಬೆಲ್ಲ ಹರಡಿತ್ತು. ಪುರವಂತರ ನೃತ್ಯ ವೀರಾವೇಶದ ವಾದ್ಯ ಬಾರಿಸುವ ಬಗೆ ರೋಮಾಂಚನದ ಅನುಭವ ತಂದಿತ್ತು.

ಪಲ್ಲಕ್ಕಿ ಸೇವೆ ನಡೆಯಿತು. 15 ಜೊತೆ ಭಕ್ತರ ತಂಡ ಗುಗ್ಗುಳೋತ್ಸವ ವನ್ನು ಭಕ್ತಿಪೂರ್ವಕವಾಗಿ ಮಡಿಯಿಂದ ನೇರವೇರಿಸಿದರು. ಭಕ್ತರು ಅಗ್ನಿ ಕುಂಡದ ಕೊಡ ಕೈಯಲ್ಲಿ ಹಿಡಿದು ಸಾಗಿದರು. ಮೆರವಣಿಗೆ ಹೊರಟ ಬೀದಿಯನ್ನು ಸುಚಿಗೊಳಿಸಲಾಗಿತ್ತು. ವಿವಿಧೆಡೆ ಪಲ್ಲಕ್ಕಿಗೆ ಆರತಿ ಮಾಡಲಾಯಿತು. ಮುತೈದೆಯರು ಪೂರ್ಣ ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿ ವಿಶೇಷ ಮೆರಗು ಮೂಡಿಸಿದ್ದರು. ಹಲವರು ಕೈಯಲ್ಲಿ ಆರತಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು

ವಾರ್ಷಿಕೋತ್ಸವ ಪ್ರಯುಕ್ತ ದೇವಸ್ಥಾನವನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಸಿರು ತಳಿರು ತೋರಣದ ಸಿಂಗಾರ ಮಾಡಲಾಗಿತ್ತು. ಹೂವಿನ ಅಲಂಕಾರ ಗಮನ ಸೆಳೆಯಿತು. ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು.

ಬೆಳಿಗ್ಗೆಯಿಂದ ಸಂಜೆಯವರೆಗೂ ಭಕ್ತರ ದಂಡು ದೇವಸ್ಥಾನದತ್ತ ಹರಿದು ಬಂತು. ಭಕ್ತರು ವೀರಭದ್ರೇಶ್ವರರನಿಗೆ ಹಣ್ಣು ಕಾಯಿ ಅರ್ಪಿಸಿ ಭಕ್ತಿ ಸೇವೆ ಸಲ್ಲಿಸಿ ಕೃತಾಜ್ಞರಾದರು.
ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು. ಅಳ್ನಾವರ ಹಾಗೂ ಸುತ್ತ ಮುತ್ತಲಿನ ಭಕ್ತರು ಭಾಗವಹಿಸಿದ್ದರು.

You might also like
Leave a comment