This is the title of the web page

ರಾಜ್ಯದ ಅಪೆಕ್ಸ, ಡಿಸಿಸಿ ಬ್ಯಾಂಕ್ ಗಳಿಂದ ೬೫೦೦ ಕೋಟಿ ರೂ. ಸಾಲ: ಮರುಪಾವತಿ ಮಾಡದ ರಾಜಕಾರಣಿಗಳು

ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣಿಗಳಿಂದ 1228 ಕೋಟಿ ಸಾಲ

ಬೆಳಗಾವಿ, ೧೦- ಅಪೆಕ್ಸ ಬ್ಯಾಂಕ್ ಗಳು ಸೇರಿದಂತೆ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ಆರ್ಥಿಕವಾಗಿ ಶೋಚನೀಯ ಸ್ಥಿತಿಗೆ ತಲುಪಿ ದುಸ್ಥಿತಿಗೆ ಬಂದಿರುವದು ರಾಜಕಾರಣಿಗಳಿಗೆ ಸಾಲ ನೀಡಿರುವದೇ ಕಾರಣವೆಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ ತಿಳಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಯಲ್ಲಿ ಸಾಲ ಪಡೆದುಕೊಂಡವರಲ್ಲಿ ಕಾಂಗ್ರೆಸ್, ಬಿಜೆಪಿ, ಹಾಗೂ ಜೆಡಿಎಸ್ ಎಲ್ಲಾ ಪಕ್ಷಗಳ ನಾಯಕರೂ ಇದ್ದಾರೆ. ಯಾರು ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿಲ್ಲವೋ ಅಂಥವರ ಮನೆಗೆ ಅಪೆಕ್ಸ ಬ್ಯಾಂಕ್ ನೋಟೀಸ ನೀಡಿ ಮರುಪಾವತಿ ಮಾಡುತ್ತಿದೆ. ಇದರಲ್ಲಿ ಯಾರೇ ಇದ್ದರೂ ಕ್ರಮ ಖಚಿತ ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆಗಳಿಗೆ ನೀಡಿರುವ ಸಾಲ ಮರುಪಾವತಿ ಮಾಡದವರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಮೇಶ ಜಾರಕಿಹೊಳಿ ಸೇರಿದಂತೆ ಸಾಲ ತೆಗೆದುಕೊಂಡ ಎಲ್ಲರಿಗೂ ನೋಟೀಸು ನೀಡಿ ಸಾಲ ವಸೂಲಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅಪೆಕ್ಸ ಹಾಗು ಡಿಸಿಸಿ ಬ್ಯಾಂಕ್ ಗಳಿಂದ ಸುಮಾರು 6500 ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಾಲ ತೆಗೆದುಕೊಂಡವರು ಯಾರು ಎಂದು ನನ್ನ ಬಳಿ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ 24 ರಾಜಕಾರಣಿಗಳು ಸುಮಾರು 1228 ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಸಾಲ ಮರು ಪಾವತಿ ಮಾಡಿಲ್ಲ ಎಂದು ಹೇಳಿದರು.

ಸಾಲ ಕಟ್ಟಿಲ್ಲದವರಿಗೆ ನೋಟೀಸ ನೀಡಲಾಗುತ್ತಿದೆ. ಅಪೆಕ್ಸ ಬ್ಯಾಂಕ್ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತಿದೆ. ಇದರಲ್ಲಿ ಪ್ರಭಾವಿಗಳನ್ನು ಹೊರಗಿಡುವ ಸಾಧ್ಯತೆಯೇ ಇಲ್ಲ, ಎಲ್ಲರ ಮನೆ ಬಾಗಿಲುಗಳಿಗೆ ನೋಟೀಸ ತಲುಪಿಸಲಾಗುವದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಆಡಳಿತಕ್ಕೆ ತಂದ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರಕಾರವನ್ನು ತಂದವರು ನಾನೊಬ್ಬನೇ ಅಲ್ಲ. ಒಟ್ಟಾರೆ 17 ಜನ ಸೇರಿಕೊಂಡು ಬಿಜೆಪಿ ಸರಕಾರವನ್ನು ಆಡಳಿತಕ್ಕೆ ತಂದಿದ್ದು, ತಮಗೆ ನೀಡಿರುವ ಸಹಕಾರ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಇಲಾಖೆಗೆ ಸಂಬಂಧಿಸಿದಂತೆ ಏನಾದರೂ ತೊಂದರೆಗಳಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ಉಳಿದಿದ್ದೆಲ್ಲವೂ ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟಿದ್ದು. ಸಚಿವ ಸಂಪುಟ ವಿಸ್ತರಣೆ ಇದು ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟಿದ್ದು. ಮುಖ್ಯಮಂತ್ರಿಗಳು ಕೇಂದ್ರದ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದರು.

ಇದೇ ವೇಳೆ ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸಾಲ ತೆಗೆದುಕೊಂಡವರ ಕುರಿತು ಸಚಿವರು ಮಾತನಾಡಿದರು. ಇದೇ ವೇಳೆ ರಮೇಶ ಜಾರಕಿಹೊಳಿ ಕುರಿತಂತೆ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕೃಯಿಸಿದ ಅವರು, ಸಕ್ಕರೆ ಕಾರ್ಖಾನೆಗೆ ಸಾಲ ಪಡೆದವರಲ್ಲಿ ಕಾಂಗ್ರೆಸ್, ಬಿಜೆಪಿ, ಹಾಗೂ ಜೆಡಿಎಸ್ ನಾಯಕರು ಎಲ್ಲರೂ ಇದ್ದಾರೆ. ಕಾಂಗ್ರೆಸ್‍ನಿಂದ ಲಕ್ಷ್ಮೀ ಹೆಬ್ಬಾಳಕರ ಹಾಗೂ ಬಂಡೆಪ್ಪ ಕಾಶಂಪೂರ, ಎಸ್‍.ಆರ್. ಪಾಟೀಲ ಸೇರಿದಂತೆ ಇನ್ನೂ ಹಲವರು ತೆಗೆದುಕೊಂಡಿದ್ದಾರೆ. ಯಾರು ಸಾಲವನ್ನು ಮರುಪಾವತಿ ಮಾಡಿಲ್ಲ ಅವರಿಗೆಲ್ಲ ಅಪೆಕ್ಸ ಬ್ಯಾಂಕ್ ನಿಂದ ನೋಟೀಸ್ ಹೋಗುತ್ತಿದೆ.ಇಲ್ಲಿ ಯಾರೋ ಒಬ್ಬರಿಗೆ ನೋಟೀಸ್ ನೀಡಿದ್ದಾರೆ ಎನ್ನುವ ಮಾತೇ ಇಲ್ಲ ಎಂದರು.

You might also like
Leave a comment