Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Editorial

ಅಪೂರ್ವ ದೀವಳಿಗೆ


ಈ ಬಾರಿಯದು ಅಪೂರ್ವ ದೀಪಾವಳಿ. ಕತ್ತಲ ಕಾರ್ತೀಕ ಬೆಳಕಾಗಿಸಲು ದೀಪ ಹಚ್ಚುವ ಹೊತ್ತು ಗ್ರಹಣದ ಕತ್ತಲು ನೀಗಿಸಬೇಕಿದೆ. ಗ್ರಹಣ ಎಂದರೆ ಹೆದರುವ ಜನ ನಾವು. ಲಕ್ಷ್ಮೀಯನ್ನು ಪೂಜಿಸುವ ಹೊತ್ತಿಗೆ ಈ ಬಾರಿ ಗ್ರಹಣ ಬಡಿದುಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣ. ಆದರೆ ಚಿಂತೆ ಬೇಡ, ಎಂದಿನಂತೆ ಗ್ರಹಣದ ಉಪವಾಸ ಮಾಡಿ ಲಕ್ಷ್ಮೀಯನ್ನು ಶ್ರದ್ಧೆ, ಸಂಭ್ರಮಗಳಿಂದ ಪೂಜಿಸಿರಿ. ಶಬ್ದ ಕಡಿಮೆ, ಬೆಳಕು ಹೆಚ್ಚಿರಲಿ.

ಈ ಬಾರಿಯ ದೀಪಾವಳಿ ಮತ್ತು ಗ್ರಹಣ ನಮಗೆ ಸಂದೇಶವೊಂದನ್ನು ನೀಡಿವೆ. ಪ್ರಕೃತಿಯಲ್ಲಿ ಹಲವು ಸಂಗತಿಗಳು ಸಹಜ ಸಂಭವಿಸುತ್ತವೆ. ಗ್ರಹಣ ಕೂಡ ಹಾಗೆ. ‘ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲದು” ಎಂಬ ಗಾದೆ ಕೇಳಿದ್ದೀರಿ. ದೀಪಾವಳಿ ಆದರೇನು, ಗ್ರಹಣ ನಿಲ್ಲದು. ಒಂದನ್ನು ಗಮನಿಸಿ, ಈ ಗ್ರಹಣ ಕೆಲ ತಾಸುಗಳ ಪ್ರಕ್ರಿಯೆ. ಇದು ಗ್ರಹ, ತಾರೆಗಳ ನಿರಂತರ ಚಲನೆಯ ಪರಿಣಾಮ ಎಂದು ವಿಜ್ಞಾನ ಹೇಳಿತು. ರಾಹು, ಕೇತುಗಳ ಆಟ ಎಂದು ನಮ್ಮ ನಂಬಿಕೆ. ಏನೇ ಆದರೂ ಇದು ಕೆಡುಕಿನ ಕ್ರಿಯೆಯಂತೂ ಅಲ್ಲ. ಆದರೆ, ಒಂದಂತೂ ನಿಜ. ಎರಡು ದುಷ್ಟ ಶಕ್ತಿಗಳು ಸೇರಿ ಏನೆಲ್ಲ ಅನಾಹುತ ಮಾಡಬಲ್ಲವು ಎಂಬುದಕ್ಕೆ ನಿದರ್ಶನ.

ಪ್ರಕೃತಿ ಕ್ರೂರಿ ಅಲ್ಲ. ಆದರೆ ಅದರ ವಿರುದ್ಧ ನಿಂತು ಅದನ್ನು ಕಾಲಡಿಯಲ್ಲಿ ತುಳಿದು ಇಟ್ಟುಕೊಳ್ಳುವ ಹಂಬಲದ ಪ್ರಕ್ರಿಯೆಗೆ ಅದು ಖಂಡಿತ ಸಿಡಿದೇಳುತ್ತದೆ. ಅದರಂತೆ ಮಾನವ ರೂಪದ ರಾಹು ಕೇತುಗಳಂಥವರು ಎದ್ದು ನಿಂತಾಗ ಇಡೀ ಸಮಾಜ ತಲ್ಲಣಿಸುತ್ತದೆ. ಅಮಾಯಕರ ಜೀವಗಳು ಬಲಿ ಆಗುತ್ತವೆ, ನ್ಯಾಯ ಮರೀಚಿಕೆಯಾಗುತ್ತದೆ. ದುಷ್ಟರು ವಿಜೃಂಭಿಸುವುದನ್ನು ಕಣ್ಣಾರೆ ಕಂಡ, ಕಾಣುತ್ತಿರುವ ಜನರಿಗೆ ಇದೆಲ್ಲ ಬಿಡಿಸಿ ಹೇಳಬೇಕಿಲ್ಲ. ಗ್ರಹಣದ ಕೆಲ ತಾಸುಗಳ ಕತ್ತಲಿಗೆ ಹೆದರುವ ಜನ, ನಿಜವಾಗಿ ಬದುಕನ್ನೇ ಕತ್ತಲಾಗಿಸುತ್ತಿರುವ ರಾಹು ಕೇತುಗಳಂಥವರ ವಿಷಯ ಇನ್ನೂ ಅರಿತಂತೆ ಕಾಣುತ್ತಿಲ್ಲ. ಇದನ್ನು ಆದಷ್ಟು ಬೇಗ ಜನ ಅರಿತುಕೊಂಡರೆ ಅನಿವಾರ್ಯವೇನೋ ಅನಿಸುವ ಹಾಗೆ ಕಾಣುತ್ತಿರುವ ಕತ್ತಲನ್ನು ದೂರ ಮಾಡಬಹುದು. ಆಗ ಸಹಜ ಹೊಸ ಬೆಳಕು, ನಿಜ ಅರ್ಥದ ದೀಪಾವಳಿ ನಡೆಯುತ್ತದೆ. ವಿಶೇಷವಾಗಿರುವ ಈ ಬಾರಿಯ ದೀಪಗಳ ಹಬ್ಬದಲ್ಲಿ ಅದಾಗಲಿ ಎಂದು ಹಾರೈಸುತ್ತೇವೆ.

-ಎ.ಬಿ.ಧಾರವಾಡಕರ
ಸಂಪಾದಕ


A B Dharwadkar
the authorA B Dharwadkar

Leave a Reply