This is the title of the web page

ಎಟಿಎಂ ಲೂಟಿ ; ಮಹಿಳಾ ಕ್ಯಾಶಿಯರ್ ಸೇರಿ 7 ಜನರ ಬಂಧನ

ಮುದ್ದೇಬಿಹಾಳ, 4- ಬ್ಯಾಂಕ್ ಎಟಿಎಂ ನ ಬೀಗದ ಕೀಲಿ ಹಾಗು ಪಾಸವರ್ಡ ಬಳಸಿ ದೋಚಲಾಗಿದ್ದ 16 ಲಕ್ಷ ರೂಪಾಯಿ ಕಳ್ಳತನ ಪ್ರಕರಣವನ್ನು ಪೊಲೀಸರು ಪತ್ತೆಮಾಡಿ ಬ್ಯಾಂಕ್ ಕ್ಯಾಶಿಯರ್, ಸಿಪಾಯಿ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಮುದ್ದೇಬಿಹಾಳದ ಹುಡ್ಕೊ ಕಾಲೋನಿಯಲ್ಲಿನ ಯೂನಿಯನ್ ಬ್ಯಾಂಕಿನ ಎಟಿಎಂ ರಾತ್ರಿ ವೇಳೆ ಬಂದ್ ಇರುತ್ತಿತ್ತು. ಕಳೆದ ನವ್ಹೆಂಬರ್ 18 ರ ರಾತ್ರಿ ಮಶೀನ್ ನ ಬೀಗ ಮುರಿದು ಪಾಸವರ್ಡ್ ಹಾಕಿ 16ಲಕ್ಷ ರೂಪಾಯಿ ಹಣ ದೋಚಲಾಗಿತ್ತು. ಈ ಕುರಿತು ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮುದ್ದೇಬಿಹಾಳ ಠಾಣೆಗೆ ದೂರು ನೀಡಿದ್ದರು.

ಎಟಿಎಂ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಅದು ಬಂದ್ ಬಿದ್ದಿತ್ತು. ವಿಡಿಯೋ ಅಥವಾ ಬೇರೆ ಯಾವುದೇ ಸಾಕ್ಷಿ ಇಲ್ಲದಿದ್ದರೂ, ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಮುದ್ದೇಬಿಹಾಳದ ಸಿಸಿ ಟಿವಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅಂದು ರಾತ್ರಿ ಒಂದು ಸ್ವಿಫ್ಟ್ ಕಾರು ಹಾಗೂ ಕೆಲವು ವ್ಯಕ್ತಿಗಳು ಅನುಮಾನಾಸ್ಪದವಾಗಿ ತಿರುಗಾಡಿರುವುದು ಕಂಡು ಬಂದಿತ್ತು. ತನಿಖೆ ವೇಳೆ ಯೂನಿಯನ್ ಬ್ಯಾಂಕ್ ಕ್ಯಾಶಿಯರ್ ಮಿಸ್ಮಿತಾ ಶರಾಭಿ ಹಾಗೂ ಸಿಪಾಯಿ ವಿಠ್ಠಲ್ ಮಂಗಳೂರ ಭಾಗಿಯಾಗಿರುವುದು ಗೊತ್ತಾಗಿತ್ತು.

ತಾನು ಅನೈತಿಕ ಸಂಬಂಧ ಹೊಂದಿದ್ದ ಮಂಜುನಾಥ ಬಿನ್ನಾಳಮಠ ಎಂಬಾತನಿಗೆ ಎಟಿಎಂ ಮಶೀನ ಪಾಸವರ್ಡ್ ನೀಡಿದ್ದೆ ಹಾಗು ಸಿಪಾಯಿ ವಿಠ್ಠಲ ಎಟಿಎಂ ಮಶೀನ್ ನ ನಕಲಿ ಕೀ ಕೊಟ್ಟಿದ್ದ. ಇವರಿಬ್ಬರ ಸಹಾಯ ಪಡೆದು ಮಂಜುನಾಥ ತನ್ನ ನಾಲ್ವರು ಸಹಚರರೊಂದಿಗೆ ಕಾರಿನಲ್ಲಿ ಬಂದು ಎಟಿಎಂ ಲೂಟಿ ಮಾಡಿದ್ದ ಎಂದು ವಿಚಾರಣೆಯಲ್ಲಿ ಕ್ಯಾಶಿಯರ್ ಮಿಸ್ಮಿತಾ ಹೇಳಿದ್ದಾಳೆ.

ಎಟಿಎಂ ಲೂಟಿ ಮಾಡಿದ್ದ ಮಂಜುನಾಥ, ಬಸವರಾಜ, ಸುರೇಶ, ಮುತ್ತು, ನಾಗರಾಜ, ವಿಠ್ಠಲ, ಮಿಸ್ಮಿತಾ ಈ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು ಅವರಿಂದ ಕಳ್ಳತನ ಮಾಡಿದ್ದ 16 ಲಕ್ಷ ರೂಪಾಯಿಯಲ್ಲಿ 13 ಲಕ್ಷ ರೂಪಾಯಿ, ಎಟಿಎಂ ಬೀಗದ ಕೈ, ಕಳ್ಳತನಕ್ಕೆ ಬಳಸಿದ್ದ ಸ್ವಿಫ್ಟ್ ಕಾರು, 5 ಸ್ಮಾರ್ಟ್ ಫೋನ್ ಗಳು ಸೇರಿ ಒಟ್ಟು 18 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

You might also like
Leave a comment