This is the title of the web page

ಮಹಾರಾಷ್ಟ್ರ ಮಂತ್ರಿ ನವಾಬ ಮಲಿಕ್ ಬಂಧನ

ಮುಂಬೈ, 23- ಮುಂಬೈ ಭೂಗತ ಜಗತ್ತಿನ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಹಾರಾಷ್ಟ್ರ ಸಚಿವ, ಎನ್ ಸಿಪಿ ನವಾಬ್ ಮಲಿಕ್ ಅವರನ್ನು ಬುಧವಾರ ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದ್ದು ಬಿಜೆಪಿಗೆ ತಲೆನೋವಾಗಿದ್ದ ಇವರ ಬಂಧನ ಸೇಡಿನ ರಾಜಕಾರಣ ಮತ್ತು ಇಡಿ ಸಂಸ್ಥೆಯ ದುರುಪಯೋಗದ ಮತ್ತೊಂದು ಉದಾಹರಣೆ ಎಂದು ಎನ್ ಸಿ ಪಿ ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಎನ್‌ಸಿಪಿ ಮುಖ್ಯ ವಕ್ತಾರ ನವಾಬ ಮಲಿಕ್ ಅವರನ್ನು ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿದೆ.

ಜಾರಿ ನಿರ್ದೇಶನಾಲಯ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ.

ನವಾಬ ಮಲಿಕ್ ಅವರು ಇಂದು ಬೆಳಗ್ಗೆ 8 ಗಂಟೆಗೆ ದಕ್ಷಿಣ ಮುಂಬೈನ ಬಲ್ಲಾರ್ಡ ಎಸ್ಟೇಟ ಪ್ರದೇಶದಲ್ಲಿರುವ ಇಡಿ ಕಚೇರಿಗೆ ಆಗಮಿಸಿದ್ದರು. ವಿಚಾರಣೆ ಬಳಿಕ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅವರನ್ನು ಬಂಧಿಸಿದೆ.

ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟು, ಭೂಗತ ಜಗತ್ತಿನ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಫೆಬ್ರವರಿ 15 ರಂದು ನವಾಬ ಮಲಿಕ್ ಅವರ ವಿರುದ್ಧ ಮುಂಬೈನಲ್ಲಿ ಹೊಸ ಪ್ರಕರಣ ದಾಖಲಿಸಿತ್ತು.

You might also like
Leave a comment