This is the title of the web page

ಕಲಾವಿದರು ಸರಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು

 

ಬೆಳಗಾವಿ 15 – ಈ ಮೊದಲು ಪ್ರಶಸ್ತಿ, ಪುರಸ್ಕಾರ, ಅಕಾಡೆಮಿ ಧನಸಹಾಯಗಳು ಉತ್ತರ ಕರ್ನಾಟಕ ಕಲಾವಿದರನ್ನು ತಲಪುತ್ತಿರಲೇ ಇಲ್ಲ. ಆದರೆ ಈಗೀಗ ಧಾರವಾಡ, ಬೆಳಗಾವಿ ಕಲಾವಿದರನ್ನು ತಲಪುತ್ತಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಇಂದಿಲ್ಲಿ ಹೇಳಿದರು.

ನಗರದ ವರ್ಣಕಲಾ ಸಾಂಸ್ಕೃತಿಕ ಸಂಘದವರು ವಾರ್ಷಿಕ ಕಲಾಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ, ವರ್ಣಕಲಾ ಪ್ರಶಸ್ತಿ, ಪ್ರದಾನ, ಚಿತ್ರಕಲಾ ಸ್ಪರ್ಧೆ, ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರದರ್ಶನ, ವರ್ಣಕಲಾ ಸದಸ್ಯರ ಚಿತ್ರಕಲಾ ಪ್ರದರ್ಶನಗಳನ್ನು ಕೆ. ಬಿ. ಕುಲಕರ್ಣಿ ಆರ್ಟ ಗ್ಯಾಲರಿ ವರೇಕರ ನಾಟ್ಯಸಂಘದಲ್ಲಿ ಹಮ್ಮಿಕೊಂಡಿದ್ದು ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿದ ವೀರಣ್ಣ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.

ಅಕಾಡೆಮಿಗಳು ಒಳ್ಳೊಳ್ಳೆ ಯೋಜನೆಗಳನ್ನು ಹೊರತಂದಿದ್ದು ಆ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಕಚೇರಿಯಲ್ಲಿ ವಿವರ ಪಡೆದು ಸರಕಾರದ ಯೋಜನೆಗಳ ಸದುಪಯೋಗ ಪಡೆಯುವಂತೆ ಕಲಾವಿದರಿಗೆ ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕಲಾವಿದ ವರ್ಣಕಲಾಶ್ರೀ ಪ್ರಶಸ್ತಿ ಪುರಸ್ಕೃತ ಎಮ್. ಆರ್. ಬಾಳಿಕಾಯಿ ಅವರು ಮಾತನಾಡುತ್ತ, ಕಲಾಜಗತ್ತು ತುಂಬ ವಿಸ್ತಾರವಾದುದು. ಈ ವಿಶಾಲವಾದ ಜಗತ್ತಿನಲ್ಲಿ ಕಲೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು

ಚಿತ್ರಕಲೆಯಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಚಂದ್ರಶೇಖರ ರಂಗನೇಕರ, ರೇಣುಕಾ ಕೇಸರಮಾಡು, ಎಫ್ ವಿ ಚಿಕ್ಕಮಠ, ಬಾಬು ಜತ್ತಕರ, ಬಿ. ಪಿ. ಮೋಹನಕುಮಾರ ಅವರಿಗೆ ವರ್ಣಶ್ರೀ ಪ್ರಶಸ್ತಿ ಹಾಗೂ ಬಸವರಾಜ ಕಾಮಜಿ ಅವರಿಗೆ ವಿಶ್ವ ಕಲಾ ದಿನ ಪ್ರಶಸ್ತಿ ಪ್ರದಾನ ಮಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಡಾ. ಎಚ್ ಬಿ. ಕೋಲಕಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಸದಸ್ಯರಾದ ರಮೇಶ ಚವ್ಹಾಣ, ಕಲಾವಿದ ಜಯಂತ ಹುಬ್ಬಳ್ಳಿ, ದಿಲೀಪಕುಮಾರ ಕಾಳೆ, ಆರ್ ಎ ದೇವರ್ಷಿ ಮುಂತಾದವರು ವೇದಿಕೆ ಮೇಲೆ ಆಸೀನರಾಗಿದ್ದರು.

ಪೂರ್ವೀ ರಜಪೂತ ಪ್ರಾರ್ಥಿಸಿದರು. ದಿಲೀಪಕುಮಾರ ಕಾಳೆ ಸ್ವಾಗತಿಸಿದರು. ಬಿ. ಎಸ್ ಗಸ್ರಿ ನಿರೂಪಿಸಿದರು.

You might also like
Leave a comment