This is the title of the web page

ಬೆಳಗಾವಿಯಲ್ಲಿ ಪೋಲೀಸರೆಂದು ಹೇಳಿ ಚಿನ್ನ ದೋಚಿದರು!

ಬೆಳಗಾವಿ, 7- ನಾವು  ಪೊಲೀಸರು ಎಂದು ಹೇಳಿಕೊಂಡು ಮದುವೆಗೆ ಹೋಗುತ್ತಿದ್ದ ವೃದ್ಧ ದಂಪತಿಗಳಿದ್ದ ಕಾರನ್ನು ತಡೆದು ಮಹಿಳೆಯೊಬ್ಬರ 25ಗ್ರಾಂ ಚಿನ್ನದ ಮಂಗಳಸೂತ್ರ ದೋಚಿಕೊಂಡು ಹೋದ ಘಟನೆ ಸೋಮವಾರ ಗಣೇಶಪುರದಲ್ಲಿ ಸಂಭವಿಸಿದೆ.

ಹಳೆ ಬೆಳಗಾವಿ ನಿವಾಸಿ ಗಣಪತ ರಾಮಚಂದ್ರ ಪಾಟೀಲ ಎಂಬವರು ತಮ್ಮ ಪತ್ನಿಯೊಂದಿಗೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಮದುವೆಗೆ ಕಾರಿನಲ್ಲಿ ಹೊರಟಿದ್ದರು. ದ್ವಿಚಕ್ರ ವಾಹನವೊಂದರಲ್ಲಿ ಇಬ್ಬರು ಬಂದು ಕಾರನ್ನು ತಡೆದು ನಿಲ್ಲಿಸಿದ್ದಾರೆ. ತಾವು ಪೊಲೀಸರೆಂದೂ ಎರಡು ದಿನಗಳ ಹಿಂದೆ ಈ ಭಾಗದಲ್ಲಿ ದೊರೆತ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನಗಳ ತಪಾಸನೆ ಮಾಡಲಾಗುತ್ತಿದೆ. ಆದ್ದರಿಂದ ತಾವು ಧರಿಸಿದ್ದ ಮಂಗಳಸೂತ್ರ, ಕರಿಮಣಿ ಸರ ಬಿಚ್ಚಿ ಕೊಡಿ, ವಸ್ತ್ರದಲ್ಲಿ ಕಟ್ಟಿಕೊಡುತ್ತೇವೆ ಎಂದು ಹೇಳಿ, ಬಿಚ್ಚಿ ಕೊಟ್ಟಾಗ ತಮ್ಮದೇ ಕೈ ವಸ್ತ್ರದಲ್ಲಿ ಸುತ್ತಿಕೊಂಡು ತಕ್ಷಣವ ಅಲ್ಲಿಂದ ಪರಾರಿಯಾಗಿದ್ದಾರೆ.

ತಾವು ಮೋಸ ಹೋಗಿದ್ದು ಗೊತ್ತಾಗುತ್ತಿದಂತೆ ದಂಪತಿಗಳು ಕೂಗಾಡಿದ್ದಾರೆ. ಆಗ ಅಲ್ಲಿ ಸೇರಿದ ಜನ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಈಗ ವಂಚಕರ ಪತ್ತೆಗೆ ರಸ್ತೆಯ ದೃಶ್ಯಗಳ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿದ್ದಾರೆ.

ಕೆಲ ವರುಷಗಳ ಹಿಂದೆ ವೃದ್ಧರನ್ನೇ ಗುರಿಯಾಗಿಸಿಕೊಂಡು ಇಂತಹ ವಂಚನೆ ಘಟನೆಗಳು ನಡೆದಿದ್ದವು. ಈಗ ಪುನಃ ಮರುಕಳಿಸಿದ್ದು ಆತಂಕಕ್ಕೆ ಕಾರಣವಾಗಿದೆ.

You might also like
Leave a comment