This is the title of the web page

ಡಾ. ಅಂಬೇಡ್ಕರ ಅವಮಾನ ಖಂಡಿಸಿ ಅಥಣಿ ಬಂದ್; ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಅಥಣಿ, 1- ರಾಯಚೂರದಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಡಿದ ಅಪಮಾನ ಖಂಡಿಸಿ, ಅವರನ್ನು ಕೂಡಲೇ ನ್ಯಾಯಾಧೀಶ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ದೇಶದ್ರೋಹಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳು ಕರೆ ನೀಡಿದ್ದ ಅಥಣಿ ಪಟ್ಟಣ ಬಂದ್ ಯಶಸ್ವಿಯಾಗಿದೆ.

ಮಂಗಳವಾರ ಪ್ರಕಾಶ ಅಂಬೇಡ್ಕರ್ ಬ್ರಿಗೇಡ್ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ,ದಲೀತ ಕ್ರಾಂತಿ ಸೇನೆ , ನ್ಯಾಯವಾದಿಗಳ ಸಂಘ, ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಅಥಣಿ ಬಂದ್‍ಗೆ ಪಟ್ಟಣದ ವರ್ತಕರು, ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದರು.

ಆಸ್ಪತ್ರೆ, ಮೆಡಿಕಲ್ ಸ್ಟೋರ್‍ ಹೊರತಪಡಿಸಿ ಎಲ್ಲಾ ಅಂಗಡಿ, ಮುಗಟ್ಟುಗಳನ್ನ ಬಂದ್ ಮಾಡಲಾಗಿತ್ತು. ಸಾರಿಗೆ ಸಂಚಾರ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಇನ್ನು ಅಮವಾಸ್ಯೆ ದಿನವಾಗಿದ್ದರಿಂದ ಹೂವಿನ ವ್ಯಾಪಾರಸ್ಥರು, ತೆಂಗಿನಕಾಯಿ ವ್ಯಾಪಾರಸ್ಥರು ಮತ್ತು ಕಾಯಿಪಲ್ಲೆ ವ್ಯಾಪಾರಸ್ಥರು ಬೆಳಿಗ್ಗೆ ಸ್ವಲ್ಪ ವ್ಯಾಪಾರ ಮಾಡಿದರು. ನಂತರ ಕಾಯಿಪಲ್ಲೆ ವ್ಯಾಪಾರವೂ ಕೂಡ ಬಂದ್ ಮಾಡಲಾಗಿತ್ತು. ಇದರಿಂದ ಅಥಣಿ ಪಟ್ಟಣ ಬಂದ್ ಯಶಸ್ವಿಯಾಯಿತು.

ಮುಂಜಾನೆಯಿಂದಲೇ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಮತ್ತು ಮುಖಂಡರು ಅಂಬೇಡ್ಕರ್ ಅವರ ಪುತ್ತಳಿಗೆ ಹೂಮಾಲೆ ಅರ್ಪಿಸುವ ಮೂಲಕ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದರು. ಅಂಬೇಡ್ಕರ ವೃತ್ತದಿಂದ ಮುಖ್ಯ ಬೀದಿಯಲ್ಲಿ ಹಾಯ್ದು , ಬುಧವಾರ ಪೇಟ, ಬಸವೇಶ್ವರ ವೃತ್ತ, ಶಿವಯೋಗಿ ವೃತ್ತ ಮತ್ತು ಚನ್ನಮ್ಮ ವೃತ್ತದ ಮೂಲಕ ಮತ್ತೆ ಅಂಬೇಡ್ಕರ್ ವೃತ್ತದಲ್ಲಿ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಪ್ರಕಾಶ್ ಅಂಬೇಡ್ಕರ್ ಬ್ರಿಗೇಡ್ ಸಂಘಟನೆಯ ಅಧ್ಯಕ್ಷ ಮಹಾಂತೇಶ ಬಾಡಗಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರವಿ ಕಾಂಬಳೆ,ಗೌತಮ ಪರಾಂಜಿಪಿ, ನ್ಯಾಯವಾದಿ ಮಿತೇಶ್ ಪಟ್ಟಣ, ಸಂಜು ತಳವಲಕರ , ಬಸವರಾಜ ಕಾಂಬಳೆ, ಸಚೀನ ಪರಾಂಜೆಪಿ, ಅಸ್ಲಮ್ ನಾಲಬಂಧ, ವಕೀಲರು, ಅಣ್ಣಸಾಬ್ ತೆಲಸಂಗ, ಭೀಮ ಆರ್ಮಿ ಅಧ್ಯಕ್ಷ ಸಂಜಯ ನಾಯಿಕ, ಬಾಬಾಸಾಬ ಕಾಂಬಳೆ, ಶ್ರೀಕಾಂತ ಅಲಗೂರ್ , ಸುನೀತಾ ಐಹೋಳೆ, ಪುರಸಭೆ ಸದಸ್ಯ ಕಲ್ಮೇಶ ಮಡ್ಡಿ, ಸಚೀನ ಪೂಜಾರಿ,ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು, ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

You might also like
Leave a comment