This is the title of the web page

ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಹಲ್ಲೆ; ೧೦ ಜನರ ಬಂಧನ

 

ಬೆಳಗಾವಿ, 27-  ಧಾಮಣೆ ಗ್ರಾಮದಲ್ಲಿ ಗುರುವಾರ ರಾತ್ರಿ ಮದುವೆಯ ಮೆರವಣಿಗೆಯಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ನಡೆದ ಕನ್ನಡಿಗರ ಮೇಲಿನ ಹಲ್ಲೆಗೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಬೆಳಗಾವಿ ಪೊಲೀಸರು ಹತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಗ್ರಾಮದಿಂದ ಪರಾರಿಯಾಗಿ ತಲೆ ತಪ್ಪಿಸಿಕೊಂಡಿರುವ ಇನ್ನುಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

“ಮರಾಠಿಗರೇ ಹೆಚ್ಚಾಗಿರುವ ಧಾಮಣೆ ಗ್ರಾಮದಲ್ಲಿ ಕನ್ನಡಿಗರ ಮೇಲಿನ ಅವರ ದೌರ್ಜನ್ಯ ಇದೇ ಮೊದಲಲ್ಲ. ಕನ್ನಡ ಅಕ್ಷರಗಳ ಕೆಲ ಶಬ್ದಗಳನ್ನು ಬರೆದ ಕಾರಣ ಕನ್ನಡಿಗರ ಬೈಕ್‍ ಒಂದನ್ನು ಕನ್ನಡ ದ್ವೇಷಿ ಮರಾಠಿಗರು ಸುಟ್ಟು ಹಾಕಿದ್ದರು. ಕನ್ನಡಿಗರು ತಮ್ಮ ಮನೆಗಳ ಮುಂದೆ ಕನ್ನಡ ನಾಮಪಾಲಕ ಹಾಕಿದರೆ ಅವರು ವಿರೋಧಿಸಿ ತೆಗೆಯಲು ಆದೇಶಿಸುತ್ತಾರೆ. ಆದರೆ, ವಿಪರ್ಯಾಸವೆಂದರೆ ಈ ಕುರಿತು
ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮರಾಠಿಗರ ದೌರ್ಜನ್ಯ ನಿಂತಿಲ್ಲ. ಪೊಲೀಸರು ಈ ಹಿಂದೆ ನಡೆದ ಘಟನೆಗಳ ಬಗ್ಗೆ ಕ್ರಮ ತೆಗೆದುಕೊಂಡಿದ್ದರೆ ನಮಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಮರಾಠಿಗರ ಹೊಡೆತದಿಂದ ಗಾಯಗೊಂಡಿರುವ ವರನ ಸಹೋದರ ಪತ್ರಕರ್ತರಿಗೆ ತಿಳಿಸಿದ್ದಾರೆ.

“ನನ್ನ ಸಹೋದರ ಮದುವೆಯಲ್ಲಿ ಕನ್ನಡ ಧ್ವಜ ಹಿಡಿದು, ಕನ್ನಡ ಹಾಡು ಹಾಕಿಕೊಂಡು ಮೆರವಣಿಗೆ ಮಾಡುತ್ತಿದ್ದ ವೇಳೆ ಅಜಯ ಯಳ್ಳೂರಕರ ಹಾಗೂ ಆಕಾಶ ಚೌಗಲೆ ಈ ರೀತಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಮದುಮಗನ ಸಹೋದರ ತಿಳಿಸಿದರು.

ಕರ್ನಾಟಕದಲ್ಲೇ ಕನ್ನಡಿಗರ ಮೇಲೆ ಹಲ್ಲೆ ಮರಾಠಿಗರಿಂದ ನಡೆದಿದೆ. ಪೋಲೀಸರ ನಿರ್ಲಕ್ಷದಿಂದ ಕನ್ನಡದ ನೆಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಮಾಡುವ ಮಟ್ಟಿಗೆ ಈ ಪುಂಡರು ಧೈರ್ಯಗೊಂಡಿದ್ದಾರೆ. ಪೊಲೀಸರು ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕಲಂ ಹೇರಿ ಶಿಕ್ಷೆ ವಿಧಿಸಬೇಕು. ಕನ್ನಡಿಗರು ತಮ್ಮ ರಾಜ್ಯದಲ್ಲಿ ನಿರ್ಭಯವಾಗಿ ವಾಸಿಸುವ ವಾತಾವರಣ ನಿರ್ಮಿಸಬೇಕೆಂದು ಕೇಳಿಕೊಂಡರು.

ಘಟನೆಯ ವಿವರ:

ಮದುವೆಯ ಮೆರವಣಿಗೆಯಲ್ಲಿ ಕನ್ನಡ ಹಾಡನ್ನು ಹಾಕಿದ್ದಕ್ಕೆ ವಧು-ವರ ಸೇರಿ ಐವರ ಮೇಲೆ ತೀವ್ರ ಹಲ್ಲೆ ಮಾಡಿದ ಪ್ರಕರಣ ಬೆಳಗಾವಿ ತಾಲೂಕಿನ ದಾಮಣೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿತ್ತು.

ಗಾಯಗೊಂಡ ಐವರಲ್ಲಿ ಒಬ್ಬರಿಗೆ ಗಂಭೀರ ಏಟು ಬಿದ್ದಿದ್ದು ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಧಾಮಣೆ ಗ್ರಾಮದ ಸೈಬಣ್ಣವರ ಕುಟುಂಬದ ಮದುವೆ ಸಮಾರಂಭದ ಹಿನ್ನೆಲೆ ರಾತ್ರಿ ಬ್ಯಾಂಡ್ ಹಚ್ಚಿ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮದುವೆ ಸಮಾವೇಶದಲ್ಲಿ ಕನ್ನಡ ಧ್ವಜ ಹಿಡಿದು ‘ಕರುನಾಡೇ’ ಹಾಡಿಗೆ ಯುವಕರು ಕುಣಿಯುತ್ತಿದ್ದರು. ಆಗ ಕೆಲ ಮರಾಠಿಗರು ಆಗಮಿಸಿ ಕನ್ನಡ ಹಾಡನ್ನು ಹಾಕದಂತೆ ಎಚ್ಚರಿಕೆ ನೀಡಿದರು. ಇದನ್ನು ನಿರ್ಲಕ್ಷ್ಯ ಮಾಡಿದ ಕನ್ನಡಿಗರು ಹಾಡಿಗೆ ನೃತ್ಯ ಮುಂದುವರೆಸಿದ್ದಾರೆ. ಆಗ ಉಭಯರ ನಡುವೆ ವಾದ ಗಲಾಟೆಯಾಗಿ ಪರಸ್ಥಿತಿ ವಿಕೋಪಕ್ಕೆ ಹೋಗಿದೆ. ಆಗ ಮರಾಠಿಗರು ಮೆರವಣಿಗೆಯಲ್ಲಿದ್ದವರ ಮೇಲಲ್ಲದೇ ವಧು ವರರ ಮೇಲೂ ಹಲ್ಲೆ ಮಾಡಿ ಪರಾರಿಯಾದರು.

ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಗೆ ಕುಟುಂಬಸ್ಥರ ದೂರು ನೀಡಿದ್ದರು.

You might also like
Leave a comment