This is the title of the web page

ವಾಯುಯಾನ ದುರಂತಗಳು

ಬುಧವಾರ ಕೊಯಮತ್ತೂರಿನ ಸುಲೂರು ವಾಯುನೆಲೆಯಿಂದ ಹೊರಟ ಹದಿನಾಲ್ಕು ಜನರಿದ್ದ ಎಂಐ17ವಿ5 ಹೆಲಿಕಾಪ್ಟರ್ ಕೂನೂರು ಸಮೀಪದ ವೆಲಿಂಗ್‍ಟನ್ ಸೈನಿಕ ಶಾಲೆಯನ್ನು ತಲುಪಬೇಕಿತ್ತು. 11.56ಕ್ಕೆ ಹೊರಟ ಈ ಹೆಲಿಕಾಪ್ಟರ್ ಇಪ್ಪತ್ತು ನಿಮಿಷದಲ್ಲಿ ತನ್ನ ಗಮ್ಯ ತಲುಪಬೇಕಿತ್ತು. ಆದರೆ 12.30ರ ಹೊತ್ತಿಗೆ ಹೆಲಿಕಾಪ್ಟರ್ ದುರಂತಕ್ಕೆ ಈಡಾಗಿದೆ ಎಂಬ ಕೆಟ್ಟ ಸುದ್ದಿ ತಲುಪಿತು. ಆಗ ಸೈನ್ಯದಲ್ಲಿ ಭಾರಿ ಗಡಿಬಿಡಿ. ಏಕೆಂದರೆ ಹೆಲಿಕಾಪ್ಟರ್‍ ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಇದ್ದರು. ದುರಂತ ನಡೆದಿದ್ದು ಕೂನೂರು ಸಮೀಪದ ಕೊಟ್ಟೂರು ಎಂಬ ಟೀ ಎಸ್ಟೇಟಿನಲ್ಲಿ. ಅದನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ನಿಬ್ಬೆರಗಾದರು. ಭಯಂಕರ ಸದ್ದಾದಾಗ ಇದೇನೆಂದು ಧಾವಿಸಿ ನೋಡಿದರೆ ಕಂಡಿದ್ದು ಹೊತ್ತಿ ಉರಿಯುತ್ತಿರುವ ಹೆಲಿಕಾಪ್ಟರ್. ಥಟ್ಟನೆ ಬಂದು ಮರವೊಂದಕ್ಕೆ ಅಪ್ಪಳಿಸಿ, ನಂತರ ಇನ್ನೊಂದು ಮರಕ್ಕೆ ಡಿಕ್ಕಿ ಹೊಡೆಯಿತು. ಆಗ ಬೆಂಕಿ ಹತ್ತಿ ದಟ್ಟ ಹೊಗೆ ಹರಡಿತು. ಸಂಜೆ ಹೊತ್ತಿಗೆ ಸೇನಾ ಮುಖ್ಯಸ್ಥರು ಮತ್ತು ಅವರ ಪತ್ನಿ ಇನ್ನಿಲ್ಲ ಎಂದು ಸುದ್ದಿ ಬಂತು. ಜೊತೆಗೆ ಇನ್ನುಳಿದ ಹನ್ನೊಂದು ಮಂದಿ ಕೂಡ ಅಸು ನೀಗಿದ್ದರು.

ಹೀಗೆ ಮಿಲಿಟರಿಗೆ ಸೇರಿದ ವಿಮಾನಗಳ ದುರಂತಕ್ಕೆ ಈಡಾಗುವುದು ಹೊಸದೇನೂ ಅಲ್ಲ. ಅದರಲ್ಲೂ ತರಬೇತಿ ವಿಮಾನ ಇಲ್ಲಿ ಬಿತ್ತು, ಅಲ್ಲಿ ಬಿತ್ತು ಎಂದು ವರದಿಗಳು ಆಗಾಗ್ಗೆ ಪ್ರಕಟ ಆಗುತ್ತಿರುತ್ತವೆ. ಕೆಲವೊಮ್ಮೆ ಈ ದುರಂತದಲ್ಲಿ ಸಾವು ಕೂಡ ಸಂಭವಿಸುತ್ತದೆ. ಆದರದು ಹೆಚ್ಚಿನ ಸುದ್ದಿ ಆಗುವುದಿಲ್ಲ. ಮೊದಲ ಬಾರಿಗೆ ಇಂಥ ಹೆಲಿಕಾಪ್ಟರ್ ಪತನ ಮತ್ತು ಸಾವು ಬಹಳ ದೊಡ್ಡ ಸುದ್ದಿ ಆಗಿದ್ದು ಎಂದರೆ, ಸಂಜಯ ಗಾಂಧಿ ಹೆಲಿಕಾಪ್ಟರ್ ದುರಂತಕ್ಕೆ ಈಡಾದಾಗ. ದೆಹಲಿಯ ಸಫ್ದರಜಂಗ್ ವಿಮಾನ ನೆಲೆಯಿಂದ ಹೊರಟ ಅವರು ಕೆಲವೇ ಕ್ಷಣದಲ್ಲಿ ನಿಯಂತ್ರಣ ಕಳೆದುಕೊಂಡರು. ಹೆಲಿಕಾಪ್ಟರ್ ಗಿರಿಗಿಟ್ಟಲೆಯಂತೆ ತಿರುಗುತ್ತಾ ಬಂದು ನೆಲಕ್ಕೆ ಅಪ್ಪಳಿಸಿ ಚೂರಾಯಿತು. ತಲೆಗೆ ಪೆಟ್ಟು ಬಿದ್ದು ಸಂಜಯ ಗಾಂಧಿ ಅಸು ನೀಗಿದ್ದರು. ಈ ಬಗ್ಗೆ ಅಂದಿನ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಪ್ರತಿಕ್ರಯಿಸಿ, ‘ನಡು ಮಧ್ಯಾಹ್ನವೇ ಸೂರ್ಯ ಅಸ್ತಂಗತನಾದ’ ಎಂದಿದ್ದರು. ಪ್ರತಿಷ್ಠಿತ ವ್ಯಕ್ತಿಯ ದುರಂತ ಸಾವು ಆಗಿದ್ದರಿಂದ ದುರಂತಕ್ಕೆ ಕಾರಣ ಏನೆಂದು ತನಿಖೆ ನಡೆಯಿತು. ಇದು ತಾಂತ್ರಿಕ ತೊಂದರೆಯಿಂದ ನಡೆದ ದುರಂತ ಅಲ್ಲ, ಸಂಜಯ ಗಾಂಧಿ ಅವರಿಗೆ ಹೆಲಿಕಾಪ್ಟರ್ ಚಲಾಯಿಸುವ ಅನುಭವ ಹೆಚ್ಚು ಇರಲಿಲ್ಲ, ಹಾಗಾಗಿಯೇ ದುರಂತ ಸಂಭವಿಸಿತು ಎಂದು ಷರಾ ಬರೆಯಲಾಯಿತು.

ಇದೇ ರೀತಿ ಹೆಚ್ಚು ಗಮನ ಸೆಳೆದ ಮತ್ತೊಂದು ಹೆಲಿಕಾಪ್ಟರ್ ದುರಂತ ಎಂದರೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರದ್ದು. ಚಿತ್ತೂರಿಗೆ ತೆರಳುತ್ತಿದ್ದ ಅವರ ಹೆಲಿಕಾಪ್ಟರ್ ನಲ್ಲಮಲ್ಲ ಅರಣ್ಯದಲ್ಲಿ ನಾಪತ್ತೆ ಆಗಿತ್ತು. 27 ತಾಸುಗಳ ಶೋಧದ ನಂತರ ಅವರ ಮೃತದೇಹ ಪತ್ತೆ ಆಗಿತ್ತು. ರಾಜಕೀಯವಾಗಿ ಬಹಳ ಮಹತ್ವ ಪಡೆದಿದ್ದ ವೈ.ಎಸ್.ಆರ್. ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಚೈತನ್ಯ ತಂದುಕೊಟ್ಟ ವ್ಯಕ್ತಿ. ಕಾಲ್ನಡಿಗೆ ಮೂಲಕ ಸಾವಿರಾರು ಕಿಲೋ ಮೀಟರ್ ನಡೆದು ರಾಜ್ಯ ಸುತ್ತಿ ಜನರ ಮನಸ್ಸು ಗೆದ್ದ ಅವರು, ಪತನದ ಹಾದಿಯಲ್ಲಿ ಇದ್ದ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಿದ್ದರು. “ಅವರು ಬದುಕಿದ್ದರೆ ರಾಜಕೀಯದ ಗತಿ ಇಂದಿಗಿಂತ ಬೇರೆಯೇ ಆಗಿರುತ್ತಿತ್ತು. ಹಾಗಾಗಬಾರದೆಂದೇ ಕೆಲವು ಶಕ್ತಿಗಳು ಅವರನ್ನು ಮುಗಿಸಿದವು” ಎಂಬ ಗುಸುಗುಸು ಆಗಿನ ಆಂಧ್ರಪ್ರದೇಶದಲ್ಲಿ ಪ್ರಚಲಿತ ಇತ್ತು.

ರಾಜಕೀಯದಲ್ಲಿ ಇದ್ದೂ, ಇಂಥದ್ದೇ ದುರಂತದಲ್ಲಿ ಮೃತರಾದ ಮಾಧವ ರಾವ ಸಿಂಧ್ಯಾ ಮತ್ತು ಇಂಥದ್ದೇ ಸಾವು ಕಂಡ ಟಿಡಿಪಿ ಪಕ್ಷದ ಲೋಕಸಭಾ ಸಭಾಪತಿ ಜಿ.ಎಂ.ಸಿ. ಬಾಲಯೋಗಿ ಪ್ರಕರಣಗಳು ತೀವ್ರತರ ವಿವಾದಕ್ಕೆ ಕಾರಣ ಆಗಲಿಲ್ಲ. ಅದರಂತೆ ಹೆಲಿಕಾಪ್ಟರ್ ದುರಂತ ಸಂಭವಿಸಿ, ಅದರಿಂದ ಪಾರಾಗಿ ಬಂದ ಅನೇಕ ರಾಜಕೀಯ ಮಂದಿ ಇದ್ದಾರೆ. ಮೊರಾರ್ಜಿ ದೇಸಾಯಿ, ಅಮರಿಂದರ ಸಿಂಗ್, ರಾಜನಾಥ ಸಿಂಗ್ ಮುಂತಾದವರು ಹೆಲಿಕಾಪ್ಟರ್ ದುರಂತ ಸಂಭವಿಸಿದರೂ ಆಶ್ಚರ್ಯಕರ ರೀತಿಯಲ್ಲಿ ಬದುಕಿ ಬಂದ ಪ್ರಸಂಗಗಳೂ ಇವೆ. ಆದರೆ ಇಂಥ ದುರಂತದಲ್ಲಿ ರಾಜಕೀಯ ಅಥವಾ ಮಹತ್ವದ ಸ್ಥಾನದಲ್ಲಿ ಇರುವ ವ್ಯಕ್ತಿ ಸಾವು ಕಂಡರೆ ಕೆಲವು ದಿನ ವಾದ ವಿವಾದ ನಡೆದು ಎಲ್ಲ ನಿಧಾನ ತಣ್ಣಗಾಗುತ್ತದೆ. ಸರ್ಕಾರ ಇಡೀ ಪ್ರಕರಣದ ತನಿಖೆ ನಡೆಸುತ್ತದೆ ಮತ್ತು ಕೊನೆಗೊಂದು ಷರಾ ಬರೆದು ಕೈ ತೊಳೆದುಕೊಳ್ಳುತ್ತದೆ. ತನಿಖೆಗಾಗಿ ಖರ್ಚು ಮಾಡುವ ಹಣ ನೋಡಿದರೆ, ಬೆಟ್ಟ ಅಗೆದು ಇಲಿ ತೆಗೆದಂತೆ ಎನ್ನಿಸುವುದು ಸಹಜ. ಈಗಿನ ಪ್ರಕರಣದಲ್ಲಿಯೂ ಹಾಗೆ ಆದರೆ ಆಶ್ಚರ್ಯ ಏನೂ ಇಲ್ಲ.

ಅತ್ಯಂತ ಸುರಕ್ಷಿತ ಎಂದೆನಿಸಿಕೊಳ್ಳುವ ರಶಿಯಾ ತಯಾರಿಕೆಯ ಈ ಹೆಲಿಕಾಪ್ಟರ್‍ ನಲ್ಲಿ ಪ್ರಯಣಿಸುತ್ತಿದ್ದಾಗ ಈಗ ದುರಂತ ಸಂಭವಿಸಿದೆ. ಅದರಲ್ಲೂ ರಶಿಯಾ ಅಧ್ಯಕ್ಷ ಪುಟಿನ್ ಬಂದ ಸಂದರ್ಭದಲ್ಲಿಯೇ ಇಂಥದೊಂದು ದುರ್ಘಟನೆ ನಡೆದದ್ದು ಕಾಕತಾಳೀಯವೇ ಇರಬಹುದು. ರಶಿಯಾದ ಈ ಹೆಲಿಕಾಪ್ಟರ್ ಜಗತ್ತಿನ ಬಹುಪಾಲು ರಾಷ್ಟ್ರಗಳ ಸೇನೆಯ ಬಳಕೆಯಲ್ಲಿ ಇದೆ. ಸಾವಿರಾರು ತಾಸು ಹಾರಾಟ ಯಶಸ್ವಿಯಾಗಿ ನಡೆಸಿರುವ ದಾಖಲೆಯೂ ಈ ಹೆಲಿಕಾಪ್ಟರದು ಇದೆ. ಪ್ರಧಾನಿ ಸೇರಿದಂತೆ ಇತರ ಗಣ್ಯರ ಪ್ರಯಾಣಕ್ಕೆ ಬಳಕೆ ಆಗುವ ಈ ಹೆಲಿಕಾಪ್ಟರ್‍ ನ ಅತ್ಯಾಧುನಿಕ ಮಾದರಿ ಎಂಐ17ವಿ5 ರಲ್ಲಿ ವಿಮಾನ ಸುರಕ್ಷತೆಯ ಎಲ್ಲ ಕ್ರಮಗಳನ್ನೂ ಅಳವಡಿಸಲಾಗಿದೆ. ನಮ್ಮ ದೇಶದ ಅಗತ್ಯಗಳನ್ನು ಪರಿಗಣಿಸಿಯೇ ಹಲವಾರು ಮಾರ್ಪಾಡುಗಳನ್ನು ಸಹ ಮಾಡಲಾಗಿದೆ. ದುರಂತ ಸಂಭವಿಸಿದ ಹೆಲಿಕಾಪ್ಟರ್ ಚಲಾಯಿಸುತ್ತಿದ್ದ ಸೈನ್ಯದ ವ್ಯಕ್ತಿ ಅತ್ಯಂತ ನುರಿತ ಚಾಲಕ. ಆತ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಆತ ಬದುಕುಳಿದು ಈ ದುರಂತಕ್ಕೆ ಕಾರಣವಾದ ಸಂಗತಿ ಏನೆಂದು ಹೇಳಿದರೆ ಉಪಯುಕ್ತ ಮಾಹಿತಿ ದೊರೆಯಬಹುದು. ಇಲ್ಲವಾದಲ್ಲಿ ಮಾಮೂಲಿ ತನಿಖೆ ಮತ್ತು ಅರ್ಥಹೀನ ಷರಾದಲ್ಲಿಯೇ ಎಲ್ಲ ಮುಗಿಯುವ ಸಾಧ್ಯತೆ ಹೆಚ್ಚು. ಈಗಂತೂ ದುರಂತಕ್ಕೆ ಕಾರಣ ತಿಳಿಯದು, ಆದರೆ ತಿಳಿದರೆ ಮುಂದಿನ ದಿನಗಳಿಗೆ ಅನುಕೂಲ ಎನ್ನುವುದಷ್ಟೇ ಕಾಳಜಿ.

-ಎ.ಬಿ.ಧಾರವಾಡಕರ
ಸಂಪಾದಕ

You might also like
Leave a comment