This is the title of the web page

ಆರ್ ಎಸ್ ಎಸ್ ಸೇರಿದಂತೆ ಕೋಮು ಭಾವನೆ ಕೆರಳಿಸುವ ಎಲ್ಲ ಸಂಘಟನೆಗಳನ್ನು ನಿಷೇಧಿಸಿ -ಎಂ.ಬಿ.ಪಾಟೀಲ

ವಿಜಯಪುರ, ೨೧- ಆರ್ ಎಸ್ ಎಸ್ ಸೇರಿದಂತೆ ಕೋಮು ಭಾವನೆ ಕೆರಳಿಸುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಗೃಹ ಮಂತ್ರಿ ಎಂ.ಬಿ. ಪಾಟೀಲ ಹೇಳಿದ್ದಾರೆ.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ (ಪಿಎಫ್ ಐ) ನಿಷೇಧದ ಕುರಿತು ಯೋಚಿಸುತ್ತಿರುವ ಬಗ್ಗೆ ಸುದ್ದಿ ಇದ್ದು ಪಿಎಫ್ ಐ ಜೊತೆ ಕೋಮು ಭಾವನೆ ಕೆರಳಿಸುವ  ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಶ್ರೀರಾಮ ಸೇನೆ, ಎಸ್ ಡಿಪಿಐ ಮತ್ತು ಎಐಎಂಐಎಂ ಸಹ ನಿಷೇಧಿಸಬೇಕು. ಇದಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಅವರು ಹೇಳಿದರು.

ಆರ್ ಎಸ್ ಎಸ್ ದೇಶದ ಸ್ವಾತಂತ್ರ ಹೋರಾಟದಲ್ಲಿ ಎಂದೂ ಭಾಗಿಯಾಗಿರಲಿಲ್ಲ. ಆರ್ ಎಸ್ ಎಸ್ ಬ್ರಿಟಿಷರ ಎಜೆಂಟಾಗಿತ್ತು ಎಂಬುದು ಜಗತ್ತಿಗೆ ಗೊತ್ತಿದೆ. ಇವರು ಜನರಲ್ಲಿ ಕೋಮು ಭಾವನೆ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಜನರಿಗೆ ಸ್ವಲ್ಪ ದಿನದಲ್ಲಿ ಇದೆಲ್ಲ ಗೊತ್ತಾಗುತ್ತೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿನ ಭ್ರಷ್ಟಾಚಾರ ತೆರೆದಿಡುತ್ತೇವೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಮೂರು ವರ್ಷಗಳಿಂದ ಇವರ ಸರ್ಕಾರ ಇದೆ. ಯಾಕೆ ಸುಮ್ಮನೇ ಕುಳಿತಿದ್ದಾರೆ. ಹೀಗೆ ಸುಮ್ಮನಿರುವುದು ಒಂದು ಅಪರಾಧ ಅಲ್ಲವೇ ಎಂದು ಪ್ರಶ್ನಿಸಿದರು.

You might also like
Leave a comment