This is the title of the web page

ಬ್ಯಾಂಕ್ ವಂಚನೆ ಪ್ರಕರಣಗಳು

ಕಳೆದ ಕೆಲವು ವರ್ಷಗಳಿಂದ ಬ್ಯಾಂಕುಗಳಿಗೆ ಮೋಸ ಮಾಡಿ, ಸಾವಿರಾರು ಕೋಟಿ ರೂಪಾಯಿ ತೆಗೆದುಕೊಂಡು ಪರಾರಿ ಆಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಸಹಕಾರಿ ಬ್ಯಾಂಕ್ ಒಂದರಲ್ಲಿಯೇ ಸಾವಿರಾರು ಕೋಟಿ ರೂಪಾಯಿ ಹಗರಣ ಆಗಿದೆ. ಈ ಕುರಿತು ಸ್ಥಳೀಯ ಸಂಸದರು ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತಂದಾಗ ಅವರು ಹೇಳಿದ್ದೇನು ಗೊತ್ತಾ? ‘ನಾನೇನು ಅವರಿಗೆಲ್ಲ ಅಲ್ಲಿ ಹಣ ಠೇವಣಿ ಇಡಲು ಹೇಳಿದ್ದೆನಾ?’ ಎಂದು. ಬಹುಷಃ ಮುಂದಿನ ದಿನಗಳಲ್ಲಿ ಯಾವ ಬ್ಯಾಂಕಿನಲ್ಲಾದರೂ ಠೇವಣಿ ಇಟ್ಟ ಹಣ ಗುಳುಂ ಆದರೆ, ಕೇಂದ್ರದ ಸಚಿವರು ಮತ್ತು ಸರ್ಕಾರ ಇದೇ ಮಾತು ಹೇಳಬಹುದು ಎಂದು ಕಾಣುತ್ತದೆ. ಇಷ್ಟೆಲ್ಲ ನಡೆಯುತ್ತಿದ್ದರೂ ನಮ್ಮ ಹಣಕಾಸು ಸಚಿವಾಲಯವು ಆ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ; ಇವೆಲ್ಲ ಹಿಂದಿನ ಯುಪಿಎ ಸರ್ಕಾರದ ಕೊಡುಗೆ ಎಂದು, ಸತ್ಯವೇ ನಾಚುವಂತೆ ಹಣಕಾಸು ಸಚಿವರು ಹೇಳಿದ್ದಾರೆ. ಇತ್ತೀಚೆಗೆ ಗುಜರಾತ್ ಮೂಲದ ಎಬಿಜಿ ಎಂಬ ಶಿಪ್ಪಿಂಗ್ ಕಂಪನಿಯು 28 ಬ್ಯಾಂಕುಗಳಿಂದ 23000 ಕೋಟಿ ರೂ. ಸಾಲ ತೆಗೆದುಕೊಂಡು ವಂಚಿಸಿರುವ ಹಿನ್ನೆಲೆಯಲ್ಲಿ ಬಂದ ಹೇಳಿಕೆ ಇದು.

ಅವರ ಮಾತು ನಿಜ ಎಂದೇ ಒಪ್ಪೋಣ. ದಾಖಲೆಗಳನ್ನು ಪರಿಶೀಲಿಸಿದಾಗ, ಬ್ಯಾಂಕ್ ವಂಚನೆಗಳು ನಡೆಯುತ್ತಲೇ ಇರುತ್ತವೆ ಎಂಬ ಅಂಶ ಸಾಬೀತಾಗಿದೆ. ಈಗಲೂ ಸಣ್ಣ ಪುಟ್ಟ ಸೈಬರ್ ಅಪರಾಧಗಳ ಮೂಲಕ ಬ್ಯಾಂಕುಗಳಿಗೆ, ಆ ಮೂಲಕ ಗ್ರಾಹಕರಿಗೆ ವಂಚಿಸುತ್ತಾ ಇರುವ ಪ್ರಕರಣಗಳು ಕಡಿಮೆ ಆಗಿಲ್ಲ, ಬದಲಿಗೆ ಹೆಚ್ಚಿವೆ. ಎಬಿಜಿ ಪಡೆದಿದ್ದ ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು 2013ರಲ್ಲಿ ಅಂದಿನ ಡಾ. ಮನಮೋಹನ ಸಿಂಗ್ ಸರ್ಕಾರ ನೋಟೀಸು ಜಾರಿ ಮಾಡಿತ್ತು. ಹಾಗೆ ನೋಡಿದರೆ ಯುಪಿಎ ಎರಡನೇ ಅವಧಿ 2009ರಿಂದ 2014ರವರೆಗೆ ನಡೆದಿದ್ದ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಮುಳುಗಿದ್ದು ಹತ್ತು ಸಾವಿರ ಕೋಟಿ ರೂಪಾಯಿ. ಅದೇ ನೂತನ ಎನ್‍ಡಿಎ ಸರ್ಕಾರ 2014ರಲ್ಲಿ ಬಂದ ನಂತರ ಈ ವರೆಗೆ ಆಗಿರುವ ಬ್ಯಾಂಕ್ ವಂಚನೆಯ ಮೊತ್ತ ಐದು ಲಕ್ಷ ಕೋಟಿಗೂ ಹೆಚ್ಚು!. ವಿದೇಶದಿಂದ ಕಪ್ಪು ಹಣ ತಂದು ಹಂಚುತ್ತೇವೆ ಎಂದವರು, ದೇಶದೊಳಗಿನ ಹಣವನ್ನೇ ರಕ್ಷಣೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂಬುದೇ ದುರಂತ.

ರಿಷಿ ಅಗರವಾಲ್ ಈಗ ಭಾರಿ ಹಗರಣ ಬಯಲಾಗಿರುವ ಎಬಿಜಿ ಕಂಪನಿಯ ಮುಖ್ಯಸ್ಥ. ಆತ ಈಗಾಗಲೇ ದೇಶ ಬಿಟ್ಟು ಪರಾರಿ ಆಗಿದ್ದಾನೆ ಎಂಬ ಮಾಹಿತಿ ಇದೆ. ಏಳು ವರ್ಷಗಳಿಗೂ ಮುಂಚಿನ ಹಗರಣ ಕುರಿತು ಸರ್ಕಾರ ಎಚ್ಚರ ತೆಗೆದುಕೊಳ್ಳಲಿಲ್ಲ. ಗುಜರಾತಿನ ಸೂರತ್ ಮೂಲದ ಈ ವಂಚಕ ಕಂಪನಿ, ಗುಜರಾತ್‍ನಲ್ಲಿ ಹಡಗು ಕಟ್ಟೆ ನಿರ್ಮಾಣಕ್ಕೆ ಭಾರಿ ಅಗ್ಗದ ದರದಲ್ಲಿ ಭಾರಿ ಪ್ರಮಾಣದ ಜಮೀನನ್ನು ರಾಜ್ಯ ಸರ್ಕಾರದಿಂದ ಪಡೆದಿತ್ತು. ಇದಕ್ಕೆ ಅಂದಿನ ಸಿಎಜಿ ವರದಿ ಆಕ್ಷೇಪ ವ್ಯಕ್ತ ಮಾಡಿತ್ತು. ಆದರೂ ಅಂದಿನ ರಾಜ್ಯ ಸರ್ಕಾರ ಪದೇ ಪದೇ ಇದೇ ಕಂಪನಿಗೆ ಹಲವಾರು ರಿಯಾಯತಿಗಳನ್ನು ನೀಡಿತ್ತಲ್ಲದೇ ಇದೇ ಸಂಸ್ಥೆ ಮತ್ತೊಂದು ಗುಜರಾತಿನ ಸಂಸ್ಥೆ ಜೊತೆ ಸೇರಿ ಮೆರೀನ್ ಇನ್‍ಸ್ಟಿಟ್ಯೂಟ್ ಸ್ಥಾಪಿಸುತ್ತದೆ ಎಂದು ಘೋಷಿಸಿತ್ತು. ಅದಕ್ಕಾಗಿ ಸರ್ಕಾರ ಜಮೀನು ನೀಡಿದ್ದು, ಅಲ್ಲಿ ಒಂದು ತುಕ್ಕು ಹಿಡಿದ ನಾಮ ಫಲಕ ಮತ್ತು ಬೇಲಿಯ ಆವರಣಕ್ಕೆ ಬೀಗ ಹಾಕಿರುವುದು ಕಾಣುತ್ತದೆ. ಹಡಗು ಕಟ್ಟೆ ನಿರ್ಮಾಣಕ್ಕಾಗಿ ಸಂಸ್ಥೆಯು ಸರ್ಕಾರಕ್ಕೆ ವಾರ್ಷಿಕ ಒಂದು ಕೋಟಿ ಗುತ್ತಿಗೆ ಹಣ ನೀಡಬೇಕಿತ್ತು. ಆದರೆ ಹಲವಾರು ವರ್ಷಗಳಿಂದ ಈ ಹಣ ಕೂಡ ಬಾಕಿ ಇದ್ದರೂ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ.

ರಾಜ್ಯದಲ್ಲಿ ತನ್ನ ಪ್ರಭಾವ ಬಳಸಿಕೊಂಡು ನಾನಾ ರಿಯಾಯತಿ ಮತ್ತು ಸರ್ಕಾರದಿಂದ ತನಗೆ ಹಲವು ಹತ್ತು ಯೋಜನೆಗಳು ಲಭ್ಯ ಇವೆ ಎಂದು ಬಿಂಬಿಸಿ 28 ಬ್ಯಾಂಕುಗಳಲ್ಲಿ ಸಂಸ್ಥೆಯು ಸಾಲ ತೆಗೆಯುತ್ತ ಹೋಯಿತು. ಬೇರೆ ದೇಶಗಳ ಜೊತೆ ಹಡಗು ನಿರ್ಮಾಣಕ್ಕೆ ಆಗಿರುವ ಒಪ್ಪಂದ ಮತ್ತು ಭಾರತೀಯ ನೌಕಾಪಡೆ ಜೊತೆ ಆಗಿರುವ ಒಪ್ಪಂದಗಳನ್ನು ಪ್ರಸ್ತಾಪಿಸಿ, ತನ್ನ ಚಟುವಟಿಕೆಗಳಿಗೆ ಅಗತ್ಯ ಹಣ ಒದಗಿಸಬೇಕೆಂದು ಬ್ಯಾಂಕುಗಳಿಗೆ ಮನವಿ ಮಾಡಿಕೊಂಡು ಅದನ್ನು ಮಂಜೂರು ಮಾಡಿಸಿಕೊಂಡಿತು. ಕಂಪನಿ ದಿವಾಳಿ ಆಗಿದೆ ಎಂದು ಇದರ ಚಟುವಟಿಕೆ ಬಗ್ಗೆ ನಿಗಾ ಇರಿಸಿದ್ದ ರಿಸರ್ವ್ ಬ್ಯಾಂಕ್ ಈಗ ಘೋಷಿಸಿದ್ದು, ಉಳಿದಿರುವ ಸ್ವತ್ತು ಹರಾಜು ಹಾಕಿ, ದೊರಕಿದಷ್ಟು ಹಣ ವಸೂಲಿಗೆ ಸಿದ್ಧತೆ ಮಾಡಿಕೊಂಡಿದೆಯಾದರೂ ದಿವಾಳಿಗೆ ಯೋಗ್ಯ ಎಂದು ಈ ಸಂಸ್ಥೆಯನ್ನು ನಮೂದಿಸಿದ ಪಟ್ಟಿ ಬಹಿರಂಗ ಆಗಲೇ ಇಲ್ಲ. ಐಸಿಐಸಿಐ ಬ್ಯಾಂಕ್‍ಗೆ ಭಾರೀ ವಂಚನೆ ಮಾಡಿತ್ತಾದರೂ ಆ ಸಂಸ್ಥೆಯ ವಂಚನೆ ಪ್ರಕರಣವನ್ನು ಅದೂ ತಡವಾಗಿ ಸಿಬಿಐ ಗಮನಕ್ಕೆ ತಂದಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಐದು ವರ್ಷದ ಹಿಂದೆ ಇದನ್ನು ಸಿಬಿಐ ಗಮನಕ್ಕೆ ತಂದರೂ ಆ ಕುರಿತು ಈ ತನಿಖಾ ಸಂಸ್ಥೆಯು ಎಬಿಜಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದು ಇತ್ತೀಚೆಗೆ. ಅದರಲ್ಲಿಯೂ, ನಿಜಕ್ಕೂ ಎಷ್ಟು ಹಣ ವಂಚನೆ ಆಗಿದೆ, ಯಾವ್ಯಾವ ಬ್ಯಾಂಕಿಗೆ ವಂಚನೆ ಆಗಿದೆ ಎಂಬ ವಿವರ ಇಲ್ಲ. ಈಗಾಗಲೇ ಈ ವಂಚನೆಯ ರೂವಾರಿ ರಿಷಿ ಅಗರವಾಲ್ ವಿದೇಶಕ್ಕೆ ಪರಾರಿ ಆಗಿದ್ದಾನೆ. ಉಳಿದ ಸಿಬ್ಬಂದಿ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ದೇಶ ಬಿಟ್ಟು ಹೋಗದಂತೆ ನಿರ್ಬಂಧಿಸುವ ನೋಟಿಸನ್ನು ಈಗ ಜಾರಿ ಮಾಡಲಾಗಿದೆ. “ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು” ಎಂಬ ಗಾದೆ ಹುಟ್ಟಿದ್ದೇ ಇಂಥವರಿಂದ ಎಂದು ಕಾಣುತ್ತದೆ.

ಕೇವಲ 56 ತಿಂಗಳಲ್ಲಿ ಈ ಹಗರಣದ ತನಿಖೆ ನಡೆಸಿ ವಾಸ್ತವಾಂಶ ಪತ್ತೆ ಮಾಡಿರುವುದಾಗಿ ಹೇಳಿಕೊಂಡಿರುವ ಹಣಕಾಸು ಸಚಿವೆ, ಇದು ನಿಜಕ್ಕೂ ಅಲ್ಪ ಅವಧಿಯಲ್ಲೇ ಮಾಡಿರುವ ಬಹು ದೊಡ್ಡ ಸಾಧನೆ ಎಂದಿದ್ದಾರೆ. ಬ್ಯಾಂಕುಗಳಿಗೆ ವಂಚಿಸಿ ಪರಾರಿ ಆದವರ ಪಟ್ಟಿ ಬೆಳೆಯುತ್ತಿರುವಂತೆ, ಅಂಥವರ ವಿರುದ್ಧ ವೀರಾವೇಶದ ಹೇಳಿಕೆಗಳನ್ನು ಸರ್ಕಾರ ಆಗಾಗ ಹೊರಡಿಸುತ್ತದೆ. ಆದರೆ ವಿದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಈ ಎಲ್ಲ ಪರಾರಿ ಕುಳಗಳ ವಿರುದ್ಧ ಇವರು ಏನೂ ಮಾಡಲು ಸಾಧ್ಯ ಆಗಿಲ್ಲ ಎಂಬುದಂತೂ ಸತ್ಯ.

ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸಿ ಹಣಕಾಸು ಸಚಿವರು ಪಾರಾಗಿದ್ದಾರೆ. ಅವರು ಇಂಥ ವಿಷಯಗಳಲ್ಲಿ ಚಾಣಾಕ್ಷರು. ಈರುಳ್ಳಿ ಬೆಲೆ ಏರಿಕೆ ಆಗಿದೆ ಎಂದು ಹೇಳಿದರೆ, ನಾನೇನು ಈರುಳ್ಳಿ ಬಳಸುವುದಿಲ್ಲ ಎಂದು ಸ್ವಲ್ಪವೂ ಅಳುಕಿಲ್ಲದೇ ಹೇಳಬಲ್ಲ ಇವರು ಅಷ್ಟೇ ಸಲೀಸಾಗಿ ಸುಳ್ಳುಗಳನ್ನು ಉರುಳಿಸಬಲ್ಲರು ಎಂಬುದಕ್ಕೆ ಈಗಿನ ಬ್ಯಾಂಕ್ ಹಗರಣ ಜ್ವಲಂತ ಸಾಕ್ಷಿ. ಇತ್ತೀಚೆಗಷ್ಟೇ ಮೇವು ಹಗರಣದಲ್ಲಿ ಲಾಲೂ ಯಾದವ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದೆ. ಮುಂದೊಂದು ದಿನ ನ್ಯಾಯಾಲಯಗಳು ಈ ಎಲ್ಲ ಬ್ಯಾಂಕ್ ಹಗರಣಗಳ ವಿಚಾರಣೆ ಕೈಗೆತ್ತಿಕೊಂಡಾಗ, ಅದ್ಯಾರಾರು ಜೈಲು ಕಾಣುತ್ತಾರೋ ತಿಳಿಯದು. ಆದರೆ ಈಗಿನ ಸರ್ಕಾರ ಬ್ಯಾಂಕ್ ಲೂಟಿ ಮಾಡುವವರಿಗೆ ವ್ಯವಸ್ಥಿತ ಕಾರ್ಯ ಯೋಜನೆ ಸಿದ್ಧ ಮಾಡಿಟ್ಟಂತೆ ಕಂಡು ಬರುತ್ತಿರುವುದಂತೂ ನಿಜ.
-ಎ.ಬಿ.ಧಾರವಾಡಕರ

You might also like
Leave a comment