ಮಾಪಸಾ, ಜುಲೈ ೧೬: ಚೋರ್ಲಾ ಘಾಟ್ ಸಮೀಪದ ಅಂಜುನೇಮ ಆಣೆಕಟ್ಟಿನ ಬಳಿ ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು, ಕೂಡಲೇ ಈ ಮಾರ್ಗದ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗುವ ಆತಂಕ ಎದುರಾಗಿದೆ.
ಗೋವಾ ರಾಜ್ಯಾದ್ಯಂತ ಕಳೆದ ಸುಮಾರು ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು ಹಲವೆಡೆ ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆಗಳು ನಡೆದಿವೆ.
ಗೋವಾದಿಂದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಅನಮೋಡ-ರಾಮನಗರ ರಾಷ್ಟ್ರೀಯ ಹೆದ್ದಾರಿ ಸಹ ಸಂಪೂರ್ಣ ಹೊಂಡದಂತಾಗಿದ್ದು ವಾಹನ ಸಂಚಾರಕ್ಕೆ ಅಲ್ಲಿಯೂ ತೀವ್ರ ಅಡ್ಡಿಯುಂಟಾಗಿದೆ. ಅಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆದು ಎಷ್ಟೋ ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೆ ಬದಲಿ ಇರುವ ಚೋರ್ಲಾ ಘಾಟ್ ಮಾರ್ಗದ ರಸ್ತೆ ಕೂಡ ಕುಸಿಯುತ್ತಿದ್ದು ಆತಂಕ ಹೆಚ್ಚಾಗಿದೆ.